ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರು ಅಳಿವೆಬಾಗಿಲಿನಲ್ಲಿ ಕಡಲಬ್ಬರಕ್ಕೆ ಮುಳುಗಿದ ಬೋಟ್: ಅಪಾಯದಿಂದ ಪಾರಾದ ಆರು ಮಂದಿ ಮೀನುಗಾರರು!

ದಕ್ಕೆಯಿಂದ ತೆರಳುತ್ತಿದ್ದಾಗ ಎದುರಾದ ಬಿರುಗಾಳಿ; ಸಹ ಮೀನುಗಾರರ ಸಾಹಸಿಕ ಕಾರ್ಯಾಚರಣೆಯಿಂದ ಉಳಿಯಿತು ಜೀವ!
ಮಂಗಳೂರು: ನಗರದ ಹಳೆ ಬಂದರು (ದಕ್ಕೆ) ಪ್ರದೇಶದಿಂದ ಕರಾವಳಿ ತೀರ ಸಮೀಪದ ಮೀನುಗಾರಿಕೆಗೆ (ಕರೆ ಫಿಶಿಂಗ್) ತೆರಳುತ್ತಿದ್ದ ಮರದ ಬೋಟ್‌ವೊಂದು ಅಳಿವೆಬಾಗಿಲಿನ ಸಮೀಪ ಸಮುದ್ರದ ಪ್ರಕ್ಷುಬ್ಧ ಅಲೆಗಳು ಹಾಗೂ ಬಿರುಗಾಳಿಗೆ ಸಿಲುಕಿ ಮುಳುಗಡೆಯಾಗಿದೆ. ಘಟನೆಯ ವೇಳೆ ಬೋಟಿನಲ್ಲಿದ್ದ ಎಲ್ಲಾ ಆರು ಮಂದಿ ಕಾರ್ಮಿಕರನ್ನು ಸಮೀಪದಲ್ಲೇ ಇದ್ದ ಇತರ ಮೀನುಗಾರರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಶನಿವಾರ ಸಂಜೆಯ ವೇಳೆಗೆ ಈ ಘಟನೆ ನಡೆದಿದ್ದು, ಕರಾವಳಿ ಮೀನುಗಾರಿಕಾ ಇಲಾಖೆಯ ಮಂಗಳೂರು ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ. ಅವರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಬಂಟ್ವಾಳ ತಾಲೂಕಿನ ಪಜೀರು-ಬೆಂಗೋಡಿ ಪದವು ನಿವಾಸಿ ಇಬ್ರಾಹಿಂ ಖಲೀಲ್ ಮೂಸಾ ಅವರ ಮಾಲೀಕತ್ವದ ‘ಅಯಾನ್’ (ನೋಂದಣಿ ಸಂಖ್ಯೆ: IND-KA-01-MM-3992) ಎಂಬ 15.1 ಮೀಟರ್ ಉದ್ದದ ಟ್ರಾಲರ್ ಬೋಟ್ ಶನಿವಾರ ಸಂಜೆ ಮೀನುಗಾರಿಕೆಗಾಗಿ ದಕ್ಕೆಯಿಂದ ಪ್ರಯಾಣ ಆರಂಭಿಸಿತ್ತು.
ಬೋಟ್ ಅಳಿವೆಬಾಗಿಲಿನ ಗಡಿಯನ್ನು ದಾಟಿ ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ಹಠಾತ್ತಾಗಿ ಬೀಸಿದ ಬಲವಾದ ಗಾಳಿ ಹಾಗೂ ರಕ್ಕಸ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿದೆ. ನೀರಿನ ಒತ್ತಡ ತಾಳಲಾರದೆ ಬೋಟ್ ಸಮುದ್ರದಲ್ಲಿ ಮುಳುಗಲು ಶುರುವಾಯಿತು. ಮುಳುಗಡೆಯಾಗುತ್ತಿದ್ದ ಬೋಟಿನ ಮುಂಭಾಗ ಮಾತ್ರ ನೀರಿನ ಮೇಲೆ ತೇಲುತ್ತಿದ್ದುದನ್ನು ಕಂಡ ಸಹ ಮೀನುಗಾರರು ಗಾಬರಿಗೊಂಡರು.
ಸಕಾಲಿಕ ನೆರವು – ತಪ್ಪಿದ ದುರಂತ:
ಬೋಟ್ ಮುಳುಗಡೆಯಾಗುತ್ತಿದ್ದಂತೆಯೇ ಅದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೂ ಮಂದಿ ಸಿಬ್ಬಂದಿ ನೀರಿಗೆ ಬಿದ್ದು ಪ್ರಾಣಾಪಾಯ ಎದುರಿಸುತ್ತಿದ್ದರು. ಈ ವೇಳೆ ಸುತ್ತಮುತ್ತಲಿದ್ದ ಮೀನುಗಾರರು ತಮ್ಮ ದೋಣಿಗಳನ್ನು ಸಮೀಪಕ್ಕೆ ತಂದು ಹಗ್ಗಗಳ ಸಹಾಯದಿಂದ ಎಲ್ಲರನ್ನೂ ಸುರಕ್ಷಿತವಾಗಿ ಮೇಲೆತ್ತಿಕೊಂಡಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಜಲ ದುರಂತವೊಂದು ಸ್ಥಳೀಯ ಬೆಸ್ತರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ.

ಮಂಗಳೂರು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ದರ್ಶನ ಕೆ ಟಿ ಮಾತನಾಡಿ
> "ದಕ್ಕೆಯಿಂದ ಸಮೀಪದ ಮೀನುಗಾರಿಕೆಗೆ ತೆರಳುತ್ತಿದ್ದ 'ಅಯಾನ್' ಹೆಸರಿನ ಬೋಟ್ ಅಳಿವೆಬಾಗಿಲು ದಾಟುತ್ತಿದ್ದಂತೆ ತೀವ್ರ ಗಾಳಿಯ ವೇಗದಿಂದಾಗಿ ನೀರಿನಲ್ಲಿ ಮುಳುಗಿದೆ. ಬೋಟಿನಲ್ಲಿದ್ದ ಎಲ್ಲಾ 6 ಮಂದಿ ಮೀನುಗಾರರನ್ನು ಇತರ ಬೋಟ್‌ಗಳಲ್ಲಿದ್ದವರು ರಕ್ಷಣೆ ಮಾಡಿದ್ದು, ಪ್ರತಿಯೊಬ್ಬರೂ ಅಪಾಯದಿಂದ ಪಾರಾಗಿದ್ದಾರೆ." ಎಂದು ತಿಳಿಸಿದ್ದಾರೆ.
> — 
>