ವೇಣೂರು: ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಬಳಿಕ ಆಕೆಯ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ ಆಟೋ ರಿಕ್ಷಾ ಚಾಲಕನನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ವೇಣೂರು ನಿವಾಸಿ ಜಮಾಲುದ್ದೀನ್ ಬಂಧನಕ್ಕೊಳಗಾದ ಆರೋಪಿ.
ಘಟನೆಯ ವಿವರ: 14 ವರ್ಷದ ವಿದ್ಯಾರ್ಥಿನಿಯೊಬ್ಬಳು ನಿತ್ಯ ಶಾಲೆಗೆ ತೆರಳಲು ಜಮಾಲುದ್ದೀನ್ ಎಂಬಾತನ ಆಟೋ ರಿಕ್ಷಾವನ್ನು ಅವಲಂಬಿಸಿದ್ದಳು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಚಾಲಕ ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಬಾಲಕಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ವಿಷಯವನ್ನು ಯಾರಿಗಾದರೂ ಬಾಯಿಬಿಟ್ಟರೆ ಪ್ರಾಣ ಸಹಿತ ಬಿಡುವುದಿಲ್ಲವೆಂದು ಹೆದರಿಸಿದ್ದ. ಇದರಿಂದ ಕಂಗೆಟ್ಟ ಬಾಲಕಿ ಭಯದಿಂದ ಯಾರಿಗೂ ಹೇಳದೆ ಮೌನವಾಗಿದ್ದಳು.
ಆಗಸ್ಟ್ 13 ರ ಸಂಜೆ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದ ಸಮಯವನ್ನು ಹೊಂಚುಹಾಕಿ ಬಂದ ಆರೋಪಿ, ಬೆದರಿಕೆ ಒಡ್ಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಘಟನೆಯಿಂದ ಧೃತಿಗೆಡದ ಬಾಲಕಿ ಆಗಸ್ಟ್ 15 ರಂದು ವೇಣೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.
ಪೋಕ್ಸೋ ಕಾಯ್ದೆಯಡಿ ಕಠಿಣ ಕೇಸ್: ಬಾಲಕಿಯ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS 2023) ಹಾಗೂ ಪೋಕ್ಸೋ ಕಾಯ್ದೆ-2012 ರ ವಿವಿಧ ಕಠಿಣ ಕಲಂ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ತನಿಖಾಧಿಕಾರಿಗಳು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.