ಬೆಂಗಳೂರು: ರಾಜ್ಯಾದ್ಯಂತ 'ಪನೀರ್' (Paneer) ಹೆಸರಿನಲ್ಲಿ ಮಾರಾಟವಾಗುತ್ತಿರುವ ಕೃತಕ (ಅನಲಾಗ್/ನಾನ್-ಡೈರಿ) ಪನೀರ್ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಆಗಸ್ಟ್ 17 ರಿಂದಲೇ ಅನ್ವಯವಾಗುವಂತೆ ಈ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.
ಏನಿದು ಕೃತಕ (ಅನಲಾಗ್) ಪನೀರ್?
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಾವಳಿಗಳ ಪ್ರಕಾರ, ಪನೀರ್ ಎಂಬುದು ಶುದ್ಧ ಹಾಲಿನಿಂದ ಮಾತ್ರ ತಯಾರಿಸಬೇಕಾದ ಪ್ರಾಮಾಣೀಕೃತ ಡೈರಿ ಉತ್ಪನ್ನವಾಗಿದೆ.
- ಹಾಲಿನ ಕೊಬ್ಬಿನ ಬದಲು ಸಸ್ಯಜನ್ಯ ಕೊಬ್ಬು: ಪನೀರ್‌ನಲ್ಲಿ ಹಾಲಿನ ಕೊಬ್ಬು (Milk Fat) ಪ್ರಮುಖ ಅಂಶವಾಗಿರುತ್ತದೆ. ಆದರೆ ಹಾಲಿನ ಘನಾಂಶ ಅಥವಾ ಕೊಬ್ಬಿನ ಬದಲಿಗೆ ಸಸ್ಯಜನ್ಯ ಎಣ್ಣೆ (Vegetable Oil), ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳನ್ನು ಬೆರೆಸಿ ತಯಾರಿಸುವ ಉತ್ಪನ್ನವೇ 'ಅನಲಾಗ್ ಪನೀರ್'.
- ಪನೀರ್ ಹೆಸರಿನಲ್ಲಿ ಮಾರಾಟ ನಿಷೇಧ: ಇಂತಹ ಕೃತಕ ಉತ್ಪನ್ನಗಳನ್ನು ಪನೀರ್ ಎಂದು ಹೆಸರಿಸಿ ಮಾರಾಟ ಮಾಡುವುದು ಅಥವಾ ಗ್ರಾಹಕರಿಗೆ ನೈಜ ಪನೀರ್ ಎಂದು ಬಿಂಬಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಹೋಟೆಲ್, ಆಹಾರ ಪದಾರ್ಥಗಳಲ್ಲೂ ಬಳಕೆ ನಿಷೇಧ:
- ಆಹಾರ ತಯಾರಿಕೆಯಲ್ಲಿ ಬಳಕೆ ಬ್ಯಾನ್: ಯಾವುದೇ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಅಥವಾ ಆಹಾರ ವ್ಯವಹಾರ ಸಂಸ್ಥೆಗಳು (FBOs) ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ಪನೀರ್ ಬಳಸುವುದನ್ನು, ಸಂಗ್ರಹಿಸುವುದನ್ನು ಮತ್ತು ಸರಬರಾಜು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಪ್ರಮಾಣೀಕೃತ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈಗಾಗಲೇ ಪ್ರತ್ಯೇಕ ಮಾನದಂಡಗಳನ್ನು ನಿಗದಿಪಡಿಸಿರುವ ಫ್ರೋಜನ್ ಡೆಸರ್ಟ್ (Frozen Dessert), ಪ್ರೊಸೆಸ್ಡ್ ಚೀಸ್ (Processed Cheese) ಹಾಗೂ ಮಿಕ್ಸ್ಡ್ ಫ್ಯಾಟ್ ಸ್ಪ್ರೆಡ್ ಮುಂತಾದ ಅಧಿಕೃತ ಆಹಾರ ಉತ್ಪನ್ನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ.
ರಾಜ್ಯಾದ್ಯಂತ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
