ಉಪ್ಪಿನಂಗಡಿ: ಮೇಸ್ತ್ರಿ ಕೆಲಸಗಾರನಿಗೆ ಒಲಿದ ಕೇರಳ ಲಾಟರಿ ಬಹುಮಾನ - 50 ಲಕ್ಷ ಬಹುಮಾನ ಗೆದ್ದ ಚಂದ್ರಯ್ಯ ಕುಂಬಾರ
Thursday, September 28, 2023
ಉಪ್ಪಿನಂಗಡಿ: ಇಲ್ಲಿನ ಗಾರೆ ಕೆಲಸಗಾರರೊಬ್ಬರಿಗೆ ಕೇರಳದ ಲಾಟರಿ ಬಹುಮಾನ ಒಲಿದಿದೆ. ಓಣಂ ಬಂಪರ್ ಲಾಟರಿಯಲ್ಲಿ ಇಳಂತಿಲ ನಿವಾಸಿ ಚಂದ್ರಯ್ಯ ಕುಂಬಾರ 50 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ.
ಇಳಂತಿಲ ಗ್ರಾಮದ ಏನ್ಮಾಡಿಯ ಚಂದ್ರಯ್ಯ ಕುಂಬಾರ ಮೇಸ್ತ್ರಿಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಚಂದ್ರಯ್ಯ ಅವರು ಕಾನತ್ತೂರಿನ ಶ್ರೀ ನಾಲ್ವರ್ ದೈವಸ್ಥಾನ ಕ್ಷೇತ್ರಕ್ಕೆ ಹೋದಾಗ ಅಲ್ಲಿನ ಲಾಟರಿ ಏಜೆನ್ಸಿಯಿಂದ 500 ರೂಪಾಯಿಯ ಓಣಂ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದರು. ಅದರ ಬಂಪರ್ ಬಹುಮಾನ 25 ಕೋಟಿ ಆಗಿದ್ದು, ಇವರು ಮೂರನೇ ಬಹುಮಾನವಾದ 50 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಚಂದ್ರಯ್ಯ ಏನ್ನಾಡಿಯ ಜನತಾ ಕಾಲನಿಯ ಐದು ಸೆಂಟ್ಸ್‌ನ ನಿವಾಸಿ. ಪತ್ನಿ ಹಾಗೂ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಅದರಲ್ಲಿ ಇಬ್ಬರಿಗೆ ಮದುವೆಯಾಗಿದೆ. ಇನ್ನಿಬ್ಬರಲ್ಲಿ ಒಬ್ಬಳು ಮೂರನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬಳು ಪ್ಯಾರಾಮೆಡಿಕಲ್ ಓದುತ್ತಿದ್ದಾಳೆ. ಅವರೊಬ್ಬರೇ ದುಡಿದು ಸಂಸಾರ ಸಾಗಿಸುತ್ತಿದ್ದರೂ, ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಕಡೆಗಣಿಸಿಲ್ಲ. ಇದೀಗ ಲಾಟರಿಯಲ್ಲಿ ಬಹುಮಾನ ಬಂದಿದ್ದರೂ ಮಕ್ಕಳ ಮದುವೆ, ಶಿಕ್ಷಣವೆಂದು ಹೇಳಿಕೊಂಡು ಸುಮಾರು 10 ಲಕ್ಷದಷ್ಟು ಸಾಲ ಮಾಡಿದ್ದಾರಂತೆ. ಅದನ್ನು ತೀರಿಸಲು ಮೊದಲ ಆದ್ಯತೆ ನೀಡುತ್ತೇನೆಂದು ಚಂದ್ರಯ್ಯ ಹೇಳಿದ್ದಾರೆ.
'ನಾನೇನು ಲಾಟರಿ ಕೊಳ್ಳುವ ಚಟದವನಲ್ಲ. ಅಪರೂಪಕ್ಕೆ ಈ ಹಿಂದೆಯೂ ಲಾಟರಿ ತೆಗೆದುಕೊಂಡಿದ್ದೇನೆ. ಈ ಸಲ ಮಾತ್ರ ಬಹುಮಾನ ಬಂದಿದೆ. ನನ್ನ ಕಷ್ಟವನ್ನು ದೇವರು ಅರಿತು ಆಶೀರ್ವದಿಸಿರಬೇಕು' ಎಂದು ಚಂದ್ರಯ್ಯ ಹೇಳಿದ್ದಾರೆ.