ಅಮೇರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಮಗು ಅನುಮಾನಾಸ್ಪದ ಸಾವು
ದಾವಣಗೆರೆ: ದಾವಣೆಗೆರೆ ಮೂಲದ ದಂಪತಿ ಹಾಗೂ ಮಗು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ಎಂಬಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ಯೋಗೇಶ್ ಹೊನ್ನಾಳ(37), ಅವರ ಪತ್ನಿ ಪ್ರತಿಭಾ ಹೊನ್ನಾಳ(35), ಪುತ್ರ ಯಶ್ ಹೊನ್ನಾಳ(6) ಎಂದು ಗುರುತಿಸಲಾಗಿದೆ.
ಅಮೇರಿಕಾದಲ್ಲಿ ಇಂಜಿನಿಯರ್ ಆಗಿರುವ ಯೋಗೇಶ್ ಹಾಗೂ ಪ್ರತಿಭಾ ದಂಪತಿಗೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗೆ ಆರು ವರ್ಷದ ಪುತ್ರನಿದ್ದಾನೆ. ಮದುವೆಯ ಬಳಿಕ ದಂಪತಿ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದಲ್ಲಿರುವ ಬಾಲ್ಟಿಮೋರ್ ಎಂಬ ಪ್ರದೇಶದಲ್ಲಿ ನೆಲೆಸಿದ್ದರು. ಎರಡು ದಿನಗಳಿಂದ ಮನೆಯಿಂದ ಯಾರು ಹೊರಬಾರದೆ ಇದ್ದುದ್ದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯ ಮನೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಆದರೆ ಯಾರೂ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಮನೆಯ ಬಳಿ ಬಂದು ಪರಿಶೀಲನೆ ನಡೆಸಿದಾಗ ಮೂವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಧಿಕಾರಿಗಳು ಬೆಂಗಳೂರಿನಲ್ಲಿ ವಾಸವಿರುವ ಯೋಗೇಶ್ ಸಹೋದರನಿಗೆ ವಿಷಯವನ್ನು ತಿಳಿಸಿದ್ದಾರೆ.
ಮೂವರ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸುವಂತೆ ಹಾಗೂ ಮೃತದೇಹಗಳನ್ನು ಆದಷ್ಟು ಬೇಗ ಭಾರತಕ್ಕೆ ತರಿಸಿಕೊಡುವಂತೆ ಯೋಗೇಶ್ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.