-->
1000938341
ಹಿಂದೂ ಎನ್ನುವುದು ಧರ್ಮವೆ ಅಲ್ಲ; ಡಾ. ಸಿದ್ದರಾಮ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ

ಹಿಂದೂ ಎನ್ನುವುದು ಧರ್ಮವೆ ಅಲ್ಲ; ಡಾ. ಸಿದ್ದರಾಮ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ

ಧಾರವಾಡ: "ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಸರಕಾರ ಮಾನ್ಯ ಮಾಡುವುದರಿಂದ ನಾವು ಹಿಂದೂ ವಿರೋಧಿಗಳಲ್ಲ. ಜೈನರು, ಸಿಖ್ಖರು, ಬೌದ್ಧರು ಹಿಂದೂ ವಿರೋಧಿಗಳಲ್ಲ. ಹಿಂದೂ ಅನ್ನುವಂತಹದ್ದು ಒಂದು ಧರ್ಮವೇ ಅಲ್ಲ" ಎಂದು ಗದಗ ತೊಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಧಾರವಾಡದ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ನಡೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆಯ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, "ಹಿಂದೂ ಅನ್ನುವಂತಹದ್ದು ಒಂದು ಜೀವನ ಮಾರ್ಗ. ಯಾವುದೇ ಒಂದು ಧರ್ಮ ಆಗ್ಬೇಕಾದ್ರೆ ಅದಕ್ಕೊಬ್ಬರು ಸ್ಥಾಪಕರಿರಬೇಕು. ಅದಕ್ಕೆ ಅದರದ್ದೇ ಆದಂತಹ ಒಂದು ಸಂವಿಧಾನ ಇರಬೇಕು. ಅವರು ಒಂದೇ ದೇವರನ್ನು ಪೂಜಿಸುವಂತಹವರು ಆಗಿರಬೇಕು. ಇದಕ್ಕೆ ಹಿಂದೂ ಪದ ಅನ್ವಯಿಸಲ್ಲ" ಎಂದು ಹೇಳಿದರು.

"ಲಿಂಗಾಯತ ಅನ್ನುವುದು ಒಂದು ಸ್ವತಂತ್ರ ಧರ್ಮ. ಇದಕ್ಕೆ ಬಸವಣ್ಣನವರು ಸಂಸ್ಥಾಪಕರಾಗಿದ್ದಾರೆ. ವಚನ ಸಾಹಿತ್ಯ ಇದರ ಸಂವಿಧಾನ. ನಾವೆಲ್ಲರೂ ಇಷ್ಟ ಲಿಂಗವನ್ನು ಪೂಜಿಸುವಂತಹವರು. ಇದು ಬಹಳ ಮುಖ್ಯ. ಹಿಂದೂ ಧರ್ಮ ಅಂತ ನಾವೇನು ಹೇಳುತ್ತೇವೋ ಅಲ್ಲಿ ಯಾವುದೇ ಪ್ರವರ್ತಕ, ಪ್ರವಾದಿ ಇಲ್ಲ. ಅದಕ್ಕೊಂದು ನಿರ್ದಿಷ್ಟ ಗ್ರಂಥ ಆಗಲಿ, ದೇವರಾಗಲಿ ಇಲ್ಲ. 33 ಕೋಟಿ ದೇವತೆಗಳನ್ನು ಪೂಜಿಸುತ್ತಾರೆ. ಅದು ವೈಧಿಕ ಧರ್ಮ. ಅದನ್ನೇ ಇವತ್ತು ಹಿಂದೂ ಧರ್ಮ ಅಂತ ಪರಿವರ್ತನೆ ಮಾಡಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ

"ಇವತ್ತು ಭಗವದ್ಗೀತೆಯ ಬಗ್ಗೆ ಅವರು ಮಾತನಾಡುತ್ತಾರೆ. ಆದರೆ ಭಗವದ್ಗೀತೆಯ 18 ಅಧ್ಯಾಯದ ಯಾವ ಒಂದು ಶ್ಲೋಕದಲ್ಲೂ ಹಿಂದೂ ಎಂಬ ಶಬ್ಧ ಪ್ರಯೋಗವನ್ನು ಮಾಡಲಾಗಿಲ್ಲ. ಜೊತೆಗೆ ವೇದಗಳಲ್ಲಿ, ಉಪನಿಷತ್​ಗಳಲ್ಲೂ ಪ್ರಯೋಗ ಆಗಿಲ್ಲ. ಅದೊಂದು ಜೀವನ ಮಾರ್ಗ. ಹಾಗಾಗಿ ನಾವು ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯುವುದರಿಂದ ಹಿಂದೂ ಧರ್ಮದ ವಿರೋಧಿಗಳು ಆಗುವುದಿಲ್ಲ" ಎಂದರು. 


ಇದೇ ವೇಳೆ, "ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮವೆಂದು ಮಾನ್ಯತೆ ಸಿಗಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಪುನಃ ಪ್ರಸ್ತಾವನೆಯನ್ನು ಸಲ್ಲಿಸಬೇಕು" ಎಂದು ಅವರು ಆಗ್ರಹಿಸಿದರು.

"ಲಿಂಗಾಯತ ಅವೈದಿಕ ಧರ್ಮ. ಲಿಂಗಾಯತ ಧರ್ಮದ ಒಳಪಂಗಡಗಳು ಸಾಮಾಜಿಕ, ಆರ್ಥಿಕ ಅಧ್ಯಯನ ನಡೆಯಬೇಕು. ಕೇಂದ್ರ, ರಾಜ್ಯ ಸರಕಾರ ಹಿಂದುಳಿದ ಪಟ್ಟಿಗೆ ಸೇರಿಸಬೇಕು. ವೀರಶೈವ, ಲಿಂಗಾಯತ ವೇದಿಕೆ ಎಂದು ಹೋರಾಟ ಮಾಡುತ್ತಿದ್ದಾರೆ. ನಾವು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಹೋರಾಡುತ್ತಿದ್ದೇವೆ. ವೀರಶೈವ, ಲಿಂಗಾಯತ ಒಂದೇ ಅನ್ನೋದಕ್ಕೆ ಯಾವ ದಾಖಲೆಯೂ ಇಲ್ಲ. ವೀರಶೈವ ಬೇರೆ ಲಿಂಗಾಯತವೇ ಬೇರೆ" ಎಂದು ಅವರು ಸ್ಪಷ್ಟಪಡಿಸಿದರು.

"ಎರಡನ್ನೂ ಸೇರಿಸಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಹೋರಾಟ ನಡೆದಿದ್ದು ಸರಿಯಲ್ಲ. ಇರುವುದು ಲಿಂಗಾಯತ ಧರ್ಮ ಒಂದೇ. 12 ನೇ ಶತಮಾನದಲ್ಲಿ ಬಸವಣ್ಣ ಅವರು ಮಾಡಿರುವುದು ಲಿಂಗಾಯತ ಧರ್ಮ. 2016ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಹೋರಾಟ ನಡೆಸಿದ್ದೆವು. ಲಿಂಗಾಯತ ಧರ್ಮ ಹೋರಾಟ ನಿರಂತರ ಸಂಘಟನೆಯಲ್ಲಿದೆ. ಈಗಲೂ ಲಿಂಗಾಯತ ಧರ್ಮ ಹೋರಾಟ ಮುಂದುವರಿಸುತ್ತೇವೆ" ಎಂದರು.

 "ಹಿಂದೆ ಈ ಸಂಬಂಧ ಹೋರಾಟ ಮಾಡಿದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರು. ಆಗ ನ್ಯಾ. ನಾಗಮೋಹನದಾಸ ನೇತೃತ್ವದಲ್ಲಿ ವರದಿ ಮಾಡಲು ಆಯೋಗ ರಚಿಸಿದ್ದರು. ಅವರು ವಿಸ್ತೃತ ವರದಿಯನ್ನು ಸಿದ್ಧಪಡಿಸಿದ್ದರು. ಆ ವರದಿ ಸಚಿವ ಸಂಪುಟದಲ್ಲಿಟ್ಟು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಅರ್ಹ ಎಂದು ನಿಶ್ಚಯಿಸಿದ್ದರು. ಬಳಿಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲನೆ ಮಾಡದೇ ವಾಪಸ್​ ಕಳುಹಿಸಿದೆ" ಎಂದರು.

"ಕೇಂದ್ರ ಸರ್ಕಾರ ಸುಳ್ಳು ಕಾರಣ ನೀಡಿ ವರದಿಯನ್ನು ವಾಪಸ್​ ನೀಡಿದೆ. ಈಗ ಮತ್ತೊಮ್ಮೆ ರಾಜ್ಯ ಸರ್ಕಾರ ಲಿಂಗಾಯತ ಸ್ವತಂತ್ರ್ಯ ಧರ್ಮ ವರದಿ ಕೇಂದ್ರಕ್ಕೆ ಸಲ್ಲಿಸಬೇಕು. ಕೇಂದ್ರ ಸರ್ಕಾರ ವರದಿಯ ವಿಚಾರ ವಿನಿಮಯ ಮಾಡಬೇಕು. ಕೇಂದ್ರ ಸರ್ಕಾರ ಕೊಟ್ಟಿದ್ದ ಕಾರಣಕ್ಕೆ ಸೂಕ್ತ ಟಿಪ್ಪಣಿ ಕೊಟ್ಟಿದ್ದೆವು. ಪುನಃ ರಾಜ್ಯ ಸರ್ಕಾರಕ್ಕೆ ಮನವಿ ಕೊಡುತ್ತೇವೆ. ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದರೆ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ" ಎಂದು ತಿಳಿಸಿದರು

Ads on article

Advertise in articles 1

advertising articles 2

Advertise under the article