ಮಧ್ಯಪ್ರದೇಶ: ಇಲ್ಲಿನ ಸತ್ನಾಗೆ ಜಿಲ್ಲೆಯ ಉಚೆಹ್ರಾ ಬ್ಲಾಕ್‌ನ ಅತರ್ವೇದಿಯಾ ಖುರ್ದ್ ಗ್ರಾಮದ ನಿವಾಸಿಯೊಬ್ಬರು ತಮ್ಮ 62ರ ಪ್ರಾಯದಲ್ಲಿ 2ನೇ ಪತ್ನಿಯಿಂದ ಮೂರು ಮಕ್ಕಳಿಗೆ ತಂದೆಯಾಗಿದ್ದಾರೆ.
ಗೋವಿಂದ್ ಕುಶ್ವಾಹ ಎಂಬ ಹೆಸರಿನ ಈ ವ್ಯಕ್ತಿಯ ಮೊದಲ ಪತ್ನಿಯ ಏಕೈಕ ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದನು. ಪುತ್ರನ ಸಾವಿನಿಂದ ಗೋವಿಂದ ಕೊರಗುತ್ತಿದ್ದರು. ಇದರಿಂದ ಅವರಿಗೆ ಎರಡನೇ ಮದುವೆ ಮಾಡಲು ಚಿಂತಿಸಿದ ಮೊದಲ ಪತ್ನಿ ಆತನಿಗೆ ಹೀರಾಬಾಯಿಯೊಂದಿಗೆ 2ನೇ ಮದುವೆ ಮಾಡಿದ್ದಾಳೆ.
ಮದುವೆಯ ಬಳಿಕ ಹೀರಾಬಾಯಿ ಗರ್ಭಿಣಿಯಾಗಿದ್ದು, ಸೋಮವಾರ ರಾತ್ರಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಸಿಸೇರಿಯನ್ ಮೂಲಕ ಹೀರಾಬಾಯಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ವೈದ್ಯರು ಈ ಬಗ್ಗೆ ಪ್ರತಿಕ್ರಿಯಿಸಿ, ಮೂರೂ ಶಿಶುಗಳು ಆರೋಗ್ಯವಾಗಿದೆ. ಆದರೆ 8 ತಿಂಗಳಿಗೆ ಜನಿಸಿದ್ದರಿಂದ ದುರ್ಬಲವಾಗಿವೆ. ಆದ್ದರಿಂದ ನವಜಾತ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.