ಶಿವಮೊಗ್ಗ: ಯುವತಿಯೊಬ್ಬಳನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿರುವ ಆತಂಕಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ನಿವಾಸಿ ರಂಜಿತಾ ಅಪಹರಣಕ್ಕೊಳಗಾದ ಯುವತಿ. ರಂಜಿತಾ ಶಿವಮೊಗ್ಗದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಳು. ಅಪಹರಣ ಮಾಡಿರುವ ದುಷ್ಕರ್ಮಿಗಳು ರಂಜಿತಾ ದೂರವಾಣಿಯಿಂದಲೇ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಕರೆ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಯುವತಿಯನ್ನು ಮೇ 14ರಂದು ಸಂಜೆ 5ಗಂಟೆಯಿಂದ ರಾತ್ರಿ 9.30ಯೊಳಗೆ ಅಪಹರಿಸಲಾಗಿದೆ. ಬಳಿಕ ಆಕೆಯ ಮೊಬೈಲ್ ನಿಂದಲೇ ಕುಟುಂಬಸ್ಥರಿಗೆ 20 ಲಕ್ಷ ರೂ.ಗೆ ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಮುಂದೆ ಆಗುವ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ.
ಈ ಸಂಬಂಧ ಯುವತಿಯ ಪಾಲಕರು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿರುವ ಪೊಲೀಸರು ದುಷ್ಕರ್ಮಿಗಳ ಹಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ.