ಕೊರಿಯನ್ ವ್ಲಾಗರ್ ಗೆ ಗುಪ್ತಾಂಗ ಪ್ರದರ್ಶಿಸಿದ ಯುವಕ: ವೀಡಿಯೋ ವೈರಲ್ ಮಾಡಿದ ಸಂತ್ರಸ್ತೆ, ನೆಟ್ಟಿಗರಿಂದ ಆಕ್ರೋಶ

ನವದೆಹಲಿ: ಇತ್ತೀಚೆಗೆ ವ್ಲಾಗರ್ ಗಳು, ಯೂಟ್ಯೂಬರ್ ಗಳು ಪ್ರವಾಸಿ ತಾಣಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ವಿಶೇಷತೆಗಳನ್ನು ವೀಡಿಯೋ ಚಿತ್ರೀಕರಿಸಿ ವಿಶ್ಲೇಷಣೆ ಮಾಡಿ ತಮ್ಮ ವ್ಲಾಗ್ ಗಳಲ್ಲಿ, ಯೂಟ್ಯೂಬ್ ಗಳಲ್ಲಿ ಅಪ್ಲೋಡ್ ಮಾಡೋದು ಸಾಮಾನ್ಯ. ಆದರೆ ಕೆಲವೊಂದು ‌ಬಾರಿ ವೀಡಿಯೋ ಚಿತ್ರೀಕರಣದ ವೇಳೆ ಏನೇನೋ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. 

ಇದೀಗ ಯುವಕನೋರ್ವನು ರಾಜಸ್ಥಾನದ ಜೋಧಪುರದಲ್ಲಿ ಕೊರಿಯನ್ ವ್ಲಾಗರ್‌ಗೆ ಗುಪ್ತಾಂಗ ಪ್ರದರ್ಶಿಸುವ ಮೂಲಕ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಯುವಕ ಗುಪ್ತಾಂಗ ಪ್ರದರ್ಶಿಸಿದ ವಿಡಿಯೋವನ್ನು ಸಂತ್ರಸ್ತೆ ಕೊರಿಯನ್ ಬ್ಲಾಗರ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಅದರ ಆಧಾರದ ಮೇಲೆ ಯುವಕನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.


ಜೋಧಪುರದ ಪ್ರವಾಸಿ ತಾಣದಲ್ಲಿ ಕೊರಿಯನ್ ಯುವತಿ ವೀಡಿಯೋ ಚಿತ್ರೀಕರಣ ಮಾಡುತ್ತ ವಿಶ್ಲೇಷಣೆ ಮಾಡುತ್ತಿದ್ದಳು. ಈ ವೇಳೆ ಆಕೆಯನ್ನು ಹಿಂಬಾಲಿಸಿದ ಯುವಕನೊಬ್ಬ ಆಕೆಯ ಎದುರೇ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹದ್ದು ಮೀರಿ ವರ್ತಿಸಿದ್ದಾನೆ. ಈ ವೀಡಿಯೋವನ್ನು ರೆಕಾರ್ಡ್ ಮಾಡಿದ್ದ ಯುವತಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ವೀಡಿಯೋ ವೈರಲ್ ಆಗಿತ್ತಿದ್ದಂತೆ ಯುವಕನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣ ಆತನನ್ನು ಬಂಧಿಸುವಂತೆ ಒತ್ತಾಯವೂ ಕೇಳಿ ಬಂದಿತ್ತು.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಕೊರಿಯನ್ ಬ್ಲಾಗರ್‌ನ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವಕನ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿ ರಾಜಸ್ಥಾನದ ಸಿಎಂಗೆ ಸ್ವಾತಿ ಮಾಲಿವಾಲ್ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿರುವುದಾಗಿ ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.