ಉಜಿರೆ: ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಬಸ್ ನಿಂದ ಎಳೆದುಹಾಕಿ ಅನ್ಯಕೋಮಿನ ಯುವಕನಿಗೆ ಹಲ್ಲೆ

ಬೆಳ್ತಂಗಡಿ: ಅನ್ಯಕೋಮಿನ ಯುವಕನೋರ್ವನು ಹಿಂದೂ ಯುವತಿಯೊಂದಿಗೆ ಮಾತನಾಡಿದಕ್ಕೆ ಆತನನ್ನು ಬಸ್​ನಿಂದ ಎಳೆದುಹಾಕಿ ಹಲ್ಲೆ ಮಾಡಿರುವ ಘಟನೆ ಉಜಿರೆಯಲ್ಲಿ ನಡೆದಿದೆ.

ಕಕ್ಕಿಂಜೆ ನಿವಾಸಿ ಮೊಹಮ್ಮದ್ ಶಾಹಿಲ್(22) ಎಂಬ ಯುವಕ ಹಲ್ಲೆಗೊಳಗಾದವನು. ಜಹೀರ್ ನೀಡಿರುವ ದೂರಿನನ್ವಯ ನಿತೇಶ್, ಸಚಿನ್, ದಿನೇಶ್ ಮತ್ತು ಅವಿನಾಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹಮ್ಮದ್ ಶಾಹಿಲ್ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನಗೆ ಪರಿಚಯವಿದ್ದ ಯುವತಿಯೊಂದಿಗೆ ಮಾತನಾಡಿಸಿದ್ದ. ಇದನ್ನು ಕಂಡ ಗುಂಪೊಂದು ಯುವಕನನ್ನು ಬಸ್‌ನಿಂದ ಹೊರಗೆಳೆದು ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಹಿಲ್ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಪರಿಚಿತ ಯುವತಿಯೋರ್ವಳು ಸಿಕ್ಕಿದ್ದಾಳೆ. ಈ ವೇಳೆ ಆಕೆಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತು ಮಾತನಾಡುತ್ತಿದ್ದ. ಯುವತಿ ಬೆಳ್ತಂಗಡಿಯಲ್ಲಿ ಇಳಿದಿದ್ದಾಳೆ. ಬಸ್ಸಿನಲ್ಲಿ ಇದ್ದವರು ಇದನ್ನು ಗಮನಿಸಿ ಉಜಿರೆಯ ಯುವಕರಿಗೆ ಮಾಹಿತಿ ನೀಡಿದ್ದಾರೆ. ಜಹೀರ್ ಇದ್ದ ಬಸ್ ಉಜಿರೆಗೆ ಬರುತ್ತಿದ್ದಂತೆ ಕಾದು ನಿಂತಿದ್ದ ಯುವಕರ ತಂಡ ಶಾಹಿಲ್​ನನ್ನು ಬಸ್ಸಿನಿಂದ ಹೊರಗೆಳೆದು ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಇದೀಗ ಹಲ್ಲೆಗೆ ಒಳಗಾಗಿರುವ ಜಹೀರ್ ಬೆಳ್ತಂಗಡಿ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಂದ ಮಾಹಿತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.