-->

 ಮಾಧ್ಯಮಗಳಲ್ಲಿ ತೇಜೋವಧೆ: ಮಂಗಳೂರು ವೈದ್ಯರಿಗೆ ಕಾನೂನು ಹೋರಾಟದಲ್ಲಿ ಯಶಸ್ಸು

ಮಾಧ್ಯಮಗಳಲ್ಲಿ ತೇಜೋವಧೆ: ಮಂಗಳೂರು ವೈದ್ಯರಿಗೆ ಕಾನೂನು ಹೋರಾಟದಲ್ಲಿ ಯಶಸ್ಸು

 ಮಾಧ್ಯಮಗಳಲ್ಲಿ ತೇಜೋವಧೆ: ಮಂಗಳೂರು ವೈದ್ಯರಿಗೆ ಕಾನೂನು ಹೋರಾಟದಲ್ಲಿ ಯಶಸ್ಸು




ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಜಿಮ್ಮೀಸ್ ಸೂಪರ್ ಮಾರ್ಕೆಟ್‌ಗೆ ಮಾಸ್ಕ್ ರಹಿತವಾಗಿ ಭೇಟಿ ನೀಡಿದ ಘಟನೆ ಭಾರೀ ಪ್ರಚಾರ ಪಡೆದುಕೊಂಡಿತ್ತು. ಪೊಲೀಸರ ದುರ್ವರ್ತನೆ, ಜಿಮ್ಮೀಸ್ ಸೂಪರ್ ಮಾರ್ಕೆಟ್‌ ಮಾಲಕ ದುರಂಹಕಾರ, ಕೆಲ ವಿಕೃತ ಕುಹಕಿಗಳ ವಿರುದ್ಧ ನಡೆಸಿದ ಕಾನೂನು ಹೋರಾಟದಲ್ಲಿ ಕಕ್ಕಿಲ್ಲಾಯ ಜಯ ಪಡೆದುಕೊಂಡಿದ್ದಾರೆ. ಅದನ್ನು ಅವರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದು ಹೀಗೆ...


ಮೇ 19, 2021ರಂದು ಮಂಗಳೂರಿನ ಜಿಮ್ಮೀಸ್ ಸೂಪರ್ ಮಾರ್ಕೆಟ್ ಎಂಬ ಅಂಗಡಿಯ ಮಾಲಕರು ವಿಡಿಯೋವನ್ನು ದುರ್ಬಳಕೆ ಮಾಡಿ ಸಾಮಾಜಿಕ ಜಾಲದಲ್ಲಿ ಅಕ್ರಮವಾಗಿ ಬಿಡುಗಡೆ ಮಾಡಿದ್ದು ಹಾಗೂ ಹತಾಶೆಯಲ್ಲಿ ನರಳುತ್ತಿರುವ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅದನ್ನು ತಿರುಚಿ, ರಾಷ್ಟ್ರೀಯ-ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ನನ್ನ ತೇಜೋವಧೆಗೆ ದುರುಪಯೋಗಿಸಿಕೊಂಡದ್ದು ದೊಡ್ಡ ಸುದ್ದಿಯಾಗಿದ್ದವು. ರಾಜ್ಯ ಸರಕಾರ ಮತ್ತು ಪೊಲೀಸ್ ವ್ಯವಸ್ಥೆಯು ಕೂಡ ವಿವೇಚನೆಯಿಲ್ಲದೆ ನನ್ನ ಮೇಲೆ ಅಪರಾಧ ಪ್ರಕರಣವನ್ನು ದಾಖಲಿಸಿತ್ತು. ಇವೆಲ್ಲವುಗಳ ವಿರುದ್ಧ ನ್ಯಾಯಕ್ಕಾಗಿ ನಡೆಸಿದ ಹೋರಾಟದಲ್ಲಿ ನನಗೆ ಮೊದಲ ಹಂತದ ಯಶಸ್ಸು ದೊರಕಿದೆ.


ನ್ಯಾಯಕ್ಕಾಗಿ ನನ್ನ ಹೋರಾಟದಲ್ಲಿ ನನಗೆ ಸಲಹೆಗಳನ್ನು ನೀಡಿ ನನ್ನ ಪರವಾಗಿ ವಾದಿಸಿರುವ ಮಂಗಳೂರಿನ ನ್ಯಾಯವಾದಿಗಳಾದ ಶ್ರೀ ಚಿದಾನಂದ ಕೆದಿಲಾಯ, ಶ್ರೀ ಶಿವಪ್ರಸಾದ್ ಅಜೆಕಲ್ ಮತ್ತು ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ ಸಚಿನ್ ಬಿಎಸ್ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಹಾಗೆಯೇ, ಸತ್ಯ ಹಾಗೂ ನ್ಯಾಯಗಳ ಈ ಹೋರಾಟದಲ್ಲಿ ನನಗೆ ಅಚಲ ಬೆಂಬಲವನ್ನು ನೀಡಿದ ನನ್ನ ಕುಟುಂಬ, ಸಂಗಾತಿಗಳು ಮತ್ತು ಎಲ್ಲಾ ಹಿತೈಷಿಗಳಿಗೂ ನಾನು ಆಭಾರಿಯಾಗಿದ್ದೇನೆ.


ನನ್ನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಮೇ 19, 2021ರಂದು ಅಪರಾಹ್ನ ಅತ್ಯಂತ ತರಾತುರಿಯಲ್ಲಿ, ಸೂಕ್ತ ವಿಚಾರಣೆಯಾಗಲೀ, ಸಾಕ್ಷ್ಯಾಧಾರಗಳಾಗಲೀ ಇಲ್ಲದೆ, ಅಸಂಬದ್ಧವಾದ ಸೆಕ್ಷನ್‌ಗಳಡಿಯಲ್ಲಿ, ಪ್ರಕರಣವನ್ನು ದಾಖಲಿಸಲಾಗಿತ್ತು. ಹೀಗೆ ಪ್ರಕರಣವನ್ನು ದಾಖಲಿಸಿದ ಕ್ಷಣ ಮಾತ್ರದಲ್ಲೇ ಪ್ರಕರಣದ ವಿಚಾರಣೆಯ ಬಗ್ಗೆ ಪೋಲೀಸ್ ಅಧಿಕಾರಿಯು ನನ್ನ ಮನೆಗೆ ತಲುಪಿದ್ದರು, ನಾನು ಮನೆಯಲ್ಲಿರದೆ ಲಾಕ್ ಡೌನ್ ನಡುವೆಯೂ ನನ್ನ ಕ್ಲಿನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಲ್ಲಿಗೂ ಬಂದಿದ್ದರು. ಆ ಬಳಿಕ ಒಂದು ತಿಂಗಳಲ್ಲಿ, ಮೊದಲ ವರದಿಯಲ್ಲಿ ಇಲ್ಲದೇ ಇದ್ದ ಸೆಕ್ಷನ್ ಅನ್ನು ಕೂಡ ಸೇರಿಸಿ, ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಈ ಆರೋಪ ಪಟ್ಟಿಯನ್ನು ರದ್ದು ಪಡಿಸುವಂತೆ ಕೋರಿ ನಾವು ರಾಜ್ಯದ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ಆರೋಪ ಪಟ್ಟಿಯ ವಿಚಾರಣೆಯನ್ನು ತಡೆಹಿಡಿಯುವ ಮಧ್ಯಂತರ ಆದೇಶವನ್ನು ಆಗಸ್ಟ್ 31, 2021ರಂದು ಮಾನ್ಯ ಉಚ್ಚ ನ್ಯಾಯಾಲಯವು ನೀಡಿದ್ದು, ಅದು ಊರ್ಜಿತವಾಗಿದೆ.


ಮೂಲ ವಿಡಿಯೋವನ್ನು ತಿರುಚಿ ತಮ್ಮದೇ ಆದ ಸುಳ್ಳುಗಳನ್ನು ಸೇರಿಸಿ ತೀರಾ ಅವಹೇಳನಕಾರಿಯಾಗಿ ಪ್ರಸಾರ ಮಾಡಿದ್ದಲ್ಲದೆ, ಯಾವುದೇ ಮಾಹಿತಿಯಿಲ್ಲದೆ, ಸತ್ಯಾಸತ್ಯತೆಯನ್ನೂ ಪರಿಶೀಲಿಸದೆ ಏಕಪಕ್ಷೀಯವಾಗಿ ನನ್ನ ತೇಜೋವಧೆ ಮಾಡುವುದಕ್ಕೆ ಮತ್ತು ನನ್ನ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟಿಸುವುದಕ್ಕೆ ವಿಡಿಯೋ ಹಾಗೂ ಪತ್ರಿಕಾ ಹೇಳಿಕೆಗಳನ್ನು ಹಂಚಿದ್ದ ಭಾರತೀಯ ವೈದ್ಯಕೀಯ ಸಂಘ ಹಾಗೂ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ನ ಪದಾಧಿಕಾರಿಗಳ ಮೇಲೆ ಹಾಗೂ ಕಹಳೆ ನ್ಯೂಸ್ ಎಂಬ ಚಾನೆಲ್ ಮೇಲೆ ನಾನು ಮಂಗಳೂರಿನ ಜೆಎಂಎಫ್‌ಸಿ 2ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದು, ಅದನ್ನು ಮಾನ್ಯ ಮಾಡಿದ ನ್ಯಾಯಾಲಯವು ಎಪ್ರಿಲ್ 8, 2022ರಂದು 7 ಮಂದಿಯನ್ನು ಅಪರಾಧಿಗಳೆಂದು ಹೆಸರಿಸಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.


ಈ ಕ್ರಿಮಿನಲ್ ಪ್ರಕರಣದಲ್ಲಿ ಪುತ್ತೂರಿನ ವೈದ್ಯ ಗಣೇಶ್ ಪ್ರಸಾದ್ ಮುದ್ರಾಜೆ ಎಂಬಾತ ಮೊದಲನೇ ಆರೋಪಿಯಾಗಿದ್ದು, ಕಹಳೆ ನ್ಯೂಸ್‌ನ ಶ್ಯಾಮ್ ಸುದರ್ಶನ್ ಹೊಸಮೂಲೆ ಎಂಬಾತನು ಎರಡನೇ ಆರೋಪಿಯೂ, ಮಂಗಳೂರಿನ ವೈದ್ಯರಾದ ರಾಮಚಂದ್ರ ಕಾಮತ್, ಪ್ರಶಾಂತ್ ಭಟ್, ಅನಿಮೇಶ್ ಜೈನ್, ಎಂಎಆರ್ ಕುಡ್ವ ಹಾಗೂ ಕುಮಾರ ಸ್ವಾಮಿ ಎಂಬವರು ಕ್ರಮವಾಗಿ 3ರಿಂದ ಏಳನೇ ಆರೋಪಿಗಳಾಗಿದ್ದಾರೆ. ಎಂಎಆರ್ ಕುಡ್ವಾ ಆ ನಡುವೆ ಮೃತರಾಗಿರುವುದರಿಂದ ಆರೋಪವನ್ನು ಮನ್ನಾ ಮಾಡಲಾಗಿದ್ದು, ಉಳಿದ ಆರು ಮಂದಿ ಜಾಮೀನು ಪಡೆದುಕೊಂಡಿದ್ದಾರೆ.


ಸಿಸಿಟಿವಿ ವಿಡಿಯೋವನ್ನು ಸಾಮಾಜಿಕ ಮಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದಲ್ಲದೆ ನನ್ನ ಬಗ್ಗೆ, ನನ್ನ ತಂದೆ, ಸ್ವಾತಂತ್ರ್ಯ ಹೋರಾಟಗಾರರೂ, ತನ್ನ ಕೊನೆಯುಸಿರಿನವರೆಗೂ ತನ್ನ ಸರ್ವಸ್ವವನ್ನೂ ಈ ನಾಡಿನ ದುಡಿಯುವ ಜನರ ಹೋರಾಟಗಳಿಗಾಗಿ ಮುಡಿಪಾಗಿಟ್ಟಿದ್ದ ಶ್ರೀ ಬಿವಿ ಕಕ್ಕಿಲ್ಲಾಯರ ಬಗ್ಗೆ, ಹಾಗೂ ನನ್ನ ಗುರುಗಳೂ, ದೇಶದ ವಿಚಾರವಾದಿ ಚಳುವಳಿಯಲ್ಲಿ ಅಗ್ರಗಣ್ಯರೂ ಆಗಿರುವ ಪ್ರೊ. ನರೇಂದ್ರ ನಾಯಕ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಧ್ವನಿ ಮುದ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟ ಜಿಮ್ಮೀಸ್ ಸುಪರ್ ಮಾರ್ಕೆಟ್‌ನ ಮಾಲಕ ರಯಾನ್ ರೊಸಾರಿಯೋ ಮತ್ತು ಡೊನಾಲ್ಡ್ ರೊಸಾರಿಯೋ ಹಾಗೂ ಇವರಿಬ್ಬರಿಗೆ ಕುಮ್ಮಕ್ಕು ನೀಡಿದ ಗುರುದೇವ ಪೈ ಎಂಬಾತನ ಮೇಲೆ ಮಂಗಳೂರಿನ ಜೆಎಂಎಫ್‌ಸಿ 6ನೇ ನ್ಯಾಯಾಲಯದಲ್ಲಿ ನಾನು ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿದ್ದು, ಅದನ್ನು ಮಾನ್ಯ ಮಾಡಿರುವ ನ್ಯಾಯಾಲಯವು ಫೆಬ್ರವರಿ 23, 2023ರಂದು ಈ ಮೂವರನ್ನೂ ಅಪರಾಧಿಗಳೆಂದು ಹೆಸರಿಸಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.


ಸರಕಾರದ ಅವೈಜ್ಞಾನಿಕವಾದ, ತಪ್ಪಾದ, ಜನವಿರೋಧಿಯಾದ ನಿರ್ಧಾರಗಳನ್ನು ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ಪ್ರಶ್ನಿಸಿದ್ದಕ್ಕೆ ಅಥವಾ ವಿರೋಧಿಸಿದ್ದಕ್ಕೆ ನನ್ನ ಮೇಲೆ ರಾಜಕೀಯ ಪ್ರೇರಿತ ಪಿತೂರಿಯಿಂದ, ವೈದ್ಯಕೀಯ ಸಂಘಟನೆಗಳ ದರ್ಪ ಹಾಗೂ ಸ್ವೇಚ್ಛಾಚಾರದಿಂದ ನಡೆಸಲಾದ ವಿಕೃತವಾದ ತೇಜೋವಧೆ ಹಾಗೂ ಸುಳ್ಳು ಪ್ರಕರಣಗಳನ್ನು ಎದುರಿಸಿ ನ್ಯಾಯವು ದೊರೆಯುವವರೆಗೆ ಈ ಎಲ್ಲಾ ಹೋರಾಟಗಳನ್ನು ಮುಂದುವರಿಸುತ್ತೇನೆ.


ಈ ಹೊಸ ಕೊರೋನ ಸೋಂಕು ಮತ್ತು ಅದರ ನಿಭಾವಣೆಯ ಬಗ್ಗೆ ನಾನು ಎತ್ತಿದ್ದ ಪ್ರಶ್ನೆಗಳು, ಆತಂಕಗಳು ಹಾಗೂ ನೀಡಿದ್ದ ಸಲಹೆಗಳೆಲ್ಲವೂ ವೈಜ್ಞಾನಿಕವಾಗಿದ್ದವು, ಸರಿಯೇ ಆಗಿದ್ದವು ಎನ್ನುವುದನ್ನು ಈ 3 ವರ್ಷಗಳಲ್ಲಿ ನಡೆಸಲಾಗಿರುವ ಅಧ್ಯಯನಗಳು ಅತ್ಯಂತ ಸ್ಪಷ್ಟವಾಗಿ ದೃಢಪಡಿಸಿವೆ. ಕೊರೋನ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡುವುದರಿಂದ ಸೋಂಕಿನ ಹರಡುವಿಕೆಯನ್ನು ತಡೆಯಲು ಸಾಧ್ಯವಿಲ್ಲ, ಬದಲಿಗೆ ಎಲ್ಲಾ ವಲಯಗಳಿಗೂ ಅತ್ಯಂತ ಹಾನಿಯಾಗಬಹುದು ಎಂದು ಮಾರ್ಚ್ ಆರಂಭದಲ್ಲೇ ಹೇಳಿದ್ದು [https://sites.krieger.jhu.edu/iae/files/2022/01/A-Literature-Review-and-Meta-Analysis-of-the-Effects-of-Lockdowns-on-COVID-19-Mortality.pdf]; ಶಾಲೆ-ಕಾಲೇಜುಗಳನ್ನು ಮುಚ್ಚುವ ಅಗತ್ಯವೇ ಇಲ್ಲ, ಅದರಿಂದ ಕಲಿಕೆಗೆ ತೀವ್ರ ಹಿನ್ನಡೆಯಾಗುವುದಷ್ಟೇ ಅಲ್ಲ, ಮಕ್ಕಳ ಭವಿಷ್ಯಕ್ಕೇ ಮಾರಕವಾಗಬಹುದು ಎಂದು ಜೂನ್ 2020ರಿಂದ ಹೇಳುತ್ತಲೇ ಬಂದದ್ದು [https://www.nature.com/articles/s41562-022-01506-4]; ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡುವುದರಿಂದ ಹೆಚ್ಚಿನ ಉಪಯೋಗವೇನೂ ಇಲ್ಲ ಎಂದು ಆರಂಭದಿಂದಲೇ ಹೇಳುತ್ತಾ ಬಂದದ್ದು [https://www.cochranelibrary.com/cdsr/doi/10.1002/14651858.CD006207.pub6/full]; ಕೊರೋನ ಚಿಕಿತ್ಸೆಯಲ್ಲಿ ಸೂಕ್ಷ್ಮಾಣು ನಿರೋಧಕ ಔಷಧಗಳು ನಿರುಪಯುಕ್ತವಾಗಿವೆ ಎಂದು ಮೊದಲಿನಿಂದಲೂ ಹೇಳುತ್ತಲೇ ಇದ್ದದ್ದು; ಸರಿಯಾದ ಪರೀಕ್ಷೆಗಳನ್ನೇ ನಡೆಸದೆ, ಸಾಧಕ-ಬಾಧಕಗಳ ವಿವರಗಳೇ ಇಲ್ಲದೆ ಹೊಸ ಕೊರೋನ ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಿದ್ದನ್ನು ಜನವರಿ 2021ರಲ್ಲೇ ಪ್ರಶ್ನಿಸಿದ್ದು, ಆಗಲೇ ಸೋಂಕಿತರಾಗಿದ್ದ ಶೇ.70ಕ್ಕೂ ಹೆಚ್ಚು ಭಾರತೀಯರಿಗೆ ಲಸಿಕೆಗಳ ಅಗತ್ಯವೇ ಇಲ್ಲ ಎಂದು ಆಗಲೇ ಸ್ಪಷ್ಟವಾಗಿ ಹೇಳಿದ್ದು, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ಕಡ್ಡಾಯ ಮಾಡಿದ್ದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು [https://www.thelancet.com/journals/lancet/article/PIIS0140-6736(22)02465-5/fulltext] ಎಲ್ಲವೂ ಅತ್ಯಂತ ಸೂಕ್ತವೂ, ವೈಜ್ಞಾನಿಕವೂ ಆಗಿದ್ದವು ಎನ್ನುವುದನ್ನು ನಂತರದಲ್ಲಿ ಪ್ರಕಟವಾದ ಹಲವು ವರದಿಗಳು ಮತ್ತು ಆದೇಶಗಳು ದೃಢಪಡಿಸಿವೆ.


ವೈಜ್ಞಾನಿಕ ಚಿಂತನೆ ಮತ್ತು ಸತ್ಯಗಳು ಚಿರಂತನ, ಅವನ್ನು ಅದುಮುವುದಕ್ಕೆ ಸಾಧ್ಯವಿಲ್ಲ. ಕೊರೋನ ಕಾಲದಲ್ಲಿ ವಿಜ್ಞಾನದ ಪರವಾಗಿ, ಸತ್ಯದ ಪರವಾಗಿ, ಜನರ ಪರವಾಗಿ ದನಿಯೆತ್ತುತ್ತಲೇ ಇದ್ದ ಬಗ್ಗೆ ನನಗೆ ಹೆಮ್ಮೆ ಇದೆ, ತೃಪ್ತಿ ಇದೆ, ಅದರಿಂದ ಸ್ಪೂರ್ತಿಯೂ ದೊರೆತಿದೆ.


Ads on article

Advertise in articles 1

advertising articles 2

Advertise under the article