ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ ಶಿಶು ಸ್ಮಶಾನದಲ್ಲಿ ಜೀವಂತ
Tuesday, February 21, 2023
ಹೊಸದಿಲ್ಲಿ: ಇಲ್ಲಿನ ಎಲ್‌ಎನ್‌ಜೆಪಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಲ್ಪಟ್ಟ ನವಜಾತ ಹೆಣ್ಣು ಶಿಶುವೊಂದು ಸ್ಮಶಾನದಲ್ಲಿ ಮಣ್ಣು ಮಾಡಲು ಹೋಗಿರುವ ವೇಳೆ ಜೀವಂತವಿರುವುದು ಕಂಡುಬಂದಿದೆ ಎಂದು ಪೋಷಕರು ಹೇಳಿದ್ದಾರೆ.
ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಸ್ಮಶಾನದಲ್ಲಿ ಶಿಶು ಜೀವಂತವಿರುವುದು ಕಂಡುಬಂದಿದೆ. "ನಿನ್ನೆ ತನಗೆ ಸೊಸೆ ಹುಟ್ಟಿದ್ದಾಳೆ. ಆಕೆ ಜೀವಂತವಿದ್ದರೂ ಮಗು ಮೃತಪಟ್ಟಿದೆ ಎಂದು ಘೋಷಿಸಲಾಗಿತ್ತು'' ಎಂದು ಶಿಶುವಿನ ಮಾವ ಸಲ್ಮಾನ್ ದೂರಿದ್ದಾರೆ. ದಫನ ಮಾಡುವ ಪೆಟ್ಟಿಗೆಯಲ್ಲಿ ಶಿಶು ಜೀವಂತವಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
''ಇದು ಸಾಮಾನ್ಯ ಹೆರಿಗೆ. ಆದರೆ ತಾಯಿ ಕೇವಲ 23 ವಾರಗಳ ಗರ್ಭಿಣಿಯಗಿದ್ದಳು. ಅವಧಿಪೂರ್ವವಾಗಿ ಜನಿಸಿದ ಹೆಣ್ಣುಮಗು ಕೇವಲ 490 ಗ್ರಾಂ ತೂಕ ಇತ್ತು" ಎಂದು ವೈದ್ಯರು ಹೇಳಿದ್ದಾರೆ. ಈ ಪ್ರಕರಣ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಿಸಿದ್ದಾರೆ.
"ಮಗುವನ್ನು ನಮಗೆ ಹಸ್ತಾಂತರಿಸಿದ ಬಳಿಕ ಶಿಶುವನ್ನು ಮಣ್ಣು ಮಾಡಲು ಸಿದ್ಧತೆ ನಡೆಸಿದೆವು. ಸಂಜೆ 7.30ಕ್ಕೆ ಪೆಟ್ಟಿಗೆ ತೆರೆದಾಗ, ಮಗು ತನ್ನ ಕೈ ಕಾಲು ಅಲ್ಲಾಡಿಸುತ್ತಿರುವುದು ಕಂಡು ಬಂತು. ತಕ್ಷಣ ನಾವು ಮತ್ತೆ ಆಸ್ಪತ್ರೆಗೆ ಕರೆದೊಯ್ದೆವು" ಎಂದು ಸಲ್ಮಾನ್ ವಿವರ ನೀಡಿದ್ದಾರೆ.
ಪಿಸಿಆರ್ ಸಹಾಯವಾಣಿಗೆ ಕರೆ ಮಾಡಿದರೂ ಪೊಲೀಸರು ಒಂದು ಕಾಗದದಲ್ಲಿ ವಿವರಗಳನ್ನು ದಾಖಲಿಸಿಕೊಂಡರು ಎಂದು ಶಿಶುವಿನ ತಂದೆ ಆಪಾದಿಸಿದ್ದಾರೆ. ಆದರೆ ಕುಟುಂಬದಿಂದ ಇದುವರೆಗೆ ಲಿಖಿತ ದೂರು ಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗೆ ತೆರಳಿದಾಗ ಬಾಗಿಲು ಮುಚ್ಚಿದ ವೈದ್ಯರು ಮಗುವನ್ನು ಮತ್ತೆ ದಾಖಲಿಸಿಕೊಳ್ಳಲು ನಿರಾಕರಿಸಿದರು ಎಂದು ಸಲ್ಮಾನ್ ಆಪಾದಿಸಿದ್ದಾರೆ.
ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಮಗುವನ್ನು ದಾಖಲಿಸಿಕೊಳ್ಳುವಂತೆ ಪ್ರತಿಭಟನೆ ನಡೆಸಿ ಆಗ್ರಹಿಸಿದರೂ ಪ್ರಯೋಜನವಾಗಲಿಲ್ಲ. ನಾವು ಪೊಲೀಸರಿಗೆ ಕರೆ ಮಾಡಿದ ಬಳಿಕ ಅವರ ಮಧ್ಯಪ್ರವೇಶದಿಂದ ಮತ್ತೆ ದಾಖಲಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ.