“ಸೈಬರ್ ವಂಚನೆಯ ಬಗ್ಗೆ ಜಾಗೃತರಾಗಿರಬೇಕು” ಎಸಿಪಿ ನಜ್ಮಾ ಫಾರೂಕಿ


ಮಂಗಳೂರು: “ಇಂದು ಅಪರಾಧ ಕೃತ್ಯಗಳ ಸ್ವರೂಪ  ಬದಲಾಗುತ್ತಿದೆ. ಇಂದಿನ ಯುವಜನತೆ  ಮಾದಕ ವಸ್ತು ಸೇವನೆ, ಸೈಬರ್ ಕ್ರೈಂ, ಅತ್ಯಾಚಾರದಂತ ಕ್ರಿಮಿನಲ್ ಕೃತ್ಯಗಳಲ್ಲಿ‌ ಹೆಚ್ಚಾಗಿ ಶಾಮೀಲಾಗುತ್ತಿರುವುದು ಆತಂಕಕಾರಿ ವಿಚಾರ. ಅದೇ ರೀತಿ ಆನ್‌ಲೈನ್ ವಂಚನೆಗೊಳಗಾಗಿ ಅದೆಷ್ಟೂ ಮಂದಿ ಹಣ, ಬದುಕನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದಲ್ಲದೆ ಜನರೂ ಕೂಡ ಕಾನೂನು, ಮಾನವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಯುವ ಅಗತ್ಯ ಇದೆ“ ಎಂದು ಎಸಿಪಿ ನಜ್ಮಾ ಫಾರೂಕಿ ಹೇಳಿದ್ದಾರೆ.

ಅವರು ಲಯನ್ಸ್‌ ಇಂಟರ್‌ನ್ಯಾಷನಲ್‌ ಜಿಲ್ಲೆ 317 ಡಿ ವತಿಯಿಂದ ಮಂಗಳೂರಿನ ಬಲ್ಮಠದ ಶಾಂತಿನಿಲಯದಲ್ಲಿ ಇಂದು ನಡೆದ ಮಾನವ ಹಕ್ಕುಗಳು ಎನ್ನುವ ವಿಶೇಷ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. 

“ಇಂದು ಸೈಬರ್‌ ವಂಚನೆ, ಡಿಜಿಟಲ್‌ ಅರೆಸ್ಟ್‌, ಸಾಮಾಜಿಕ ಜಾಲತಾಣಗಳ ಮೂಲಕ ಬ್ಲ್ಯಾಕ್‌ಮೇಲ್‌, ಯುಪಿಎ ಸ್ಕ್ಯಾನ್‌ ಹೆಸರಲ್ಲಿ ವಂಚನೆ, ಸಾಮಾಜಿಕ ಜಾಲತಾಣಗಳಲ್ಲಿ  ಇನ್ನೊಬ್ಬರ ಹೆಸರಲ್ಲಿ ನಕಲಿ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುವುದು, ಸೆಲೆಬ್ರಿಟಿಗಳ ಫೋಟೋಗಳನ್ನು ಮಾರ್ಫ್‌ ಮಾಡಿ ವಂಚಿಸುವುದು, ಎಪಿಕೆ ಫೈಲ್‌ಗಳ ಮೂಲಕ ವಂಚನೆ, ಕೆವೈಸಿ, ಆಧಾರ್‌ ಅಪ್ಡೇಟ್‌ ಹೆಸರಲ್ಲಿ ವಂಚನೆ, ಹಣ ಡಬಲ್‌ ಆಗುತ್ತದೆ ಎಂದು ಹಣ ಹೂಡಿಸಿ ಮೋಸ ಮಾಡುವುದು ಜಾಸ್ತಿಯಾಗಿ ನಡೆಯುತ್ತಿದೆ. ಹಾಗಾಗಿ ನಾವಿಂದು ಎಷ್ಟು ಜಾಗೃತಿ ಮೂಡಿಸಿದರೂ ಸಾಲವುದಿಲ್ಲ. ಕೆವೈಸಿ ಅಪ್ಡೇಟ್‌, ಒಟಿಪಿ ಕೇಳಿದರೆ ಕೊಡಬಾರದು, ಕಸ್ಟಮ್ಸ್‌ ಹೆಸರಲ್ಲಿ ಯಾರಾದರೂ ಹೆದರಿಸಿದರೆ ಅವರಿಗೆ ಹಣ ಕೊಡಬಾರದು. ಡಿಜಿಟಲ್‌ ಅರೆಸ್ಟ್‌ ಎನ್ನುವ ಪರಿಕಲ್ಪನೆಯೇ ನಮ್ಮಲ್ಲಿಲ್ಲ. ಹಣ ಕಳೆದುಕೊಂಡವರು ಗೋಲ್ಡನ್‌ ಅವರ್‌ ನಲ್ಲಿ 1930ಗೆ ಕರೆ ಮಾಡಿದರೆ ಹಣ ವಾಪಸ್‌ ಪಡೆಯಲು ಸಾಧ್ಯ. ಡಿಜಿಟಲ್‌ ವಂಚನೆ ಪ್ರಕರಣಗಳಲ್ಲಿ ಈ ವರ್ಷ ಕಳೆದುಕೊಂಡಕ್ಕಿಂದ ಅತೀ ಕಡಿಮೆ ಹಣ ರಿಕವರಿ ಮಾಡಲಾಗಿದೆ. ಹಾಗಾಗಿ ನಾವು ಸ್ವಯಂ ಎಚ್ಚರಿಕೆಯಿಂದ ಇರಬೇಕು“ ಎಂದು ಕರೆ ನೀಡಿದರು.


”ಮಕ್ಕಳು ಮಾದಕ ವಸ್ತುಗಳಿಂದ ದೂರ ಇರಬೇಕು. ಕೆಲವೊಂದು ಅಪರಾಧಿ ಕೃತ್ಯಗಳನ್ನು ಕುತೂಹಲಕ್ಕೆಂದೂ ಮಾಡಿದರೂ ಅದು ಅಪರಾಧವೇ ಆಗುತ್ತದೆ. ಕಮೀಷನರ್‌ ಸುಧೀರ್‌ ರೆಡ್ಡಿ  ಕಾಲೇಜ್‌ಗಳಲ್ಲಿ ರಾಂಡಂ ಪರೀಕ್ಷೆ ಮಾಡಿಸಿ ಮಕ್ಕಳನ್ನು ಮಾದಕ ವ್ಯಸನಕ್ಕೀಡಾದಂತೆ ಜಾಗೃತಿ ಮೂಡಿಸುತ್ತಿದ್ದಾರೆ.  ನಿಮ್ಮ ಸ್ನೇಹಿತರ್ಯಾರೂ ಮಾದಕ ವ್ಯಸನಕ್ಕೆ ಸಿಲುಕಿದ್ದರೆ ಪೊಲೀಸರಿಗೆ ಮಾಹಿತಿ ನೀಡಿದರೆ ಅವರನ್ನು ಈ ವ್ಯಸನದಿಂದ ಮುಕ್ತಗೊಳಿಸಬಹುದು. ಮಕ್ಕಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರಲ್ಲದೆ, ಮಾದಕ ವಸ್ತುಗಳನ್ನು ಮುಟ್ಟುವುದಿಲ್ಲ ಎಂದು ಮಕ್ಕಳಿಗೆ ಪ್ರತಿಜ್ಞಾ ವಿಧಿ  ಬೋಧಿಸಿದರು.
ಪ್ರಧಾನ ಭಾಷಣ ಮಾಡಿದ ಅಡ್ವಕೇಟ್‌ ಉದಾಯನಂದ ಕೆ. ಅವರು, ಮಾನವ ಹಕ್ಕುಗಳ ಉಲ್ಲಂಘನೆಯಿಂದಲೇ ಈ ಜಗತ್ತಿನಲ್ಲಿ ಅನೇಕ ಯುದ್ಧಗಳು ನಡೆಯುತ್ತಿದೆ. ಅತ್ಯಂತ ವಿನಾಶಕಾರಿ ಅಸ್ತ್ರಗಳನ್ನು ತಯಾರಿಸಿಟ್ಟಿರುವ ನಾವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಐನ್ಸ್ಟೀನ್‌ ಹೇಳಿದಂತೆ ಮೂರನೇ ಯುದ್ಧವೇನಾದರೂ ನಡೆದರೆ ನಾಲ್ಕನೇ ಯುದ್ಧ ನಡೆಯುವುದಿಲ್ಲ. ಯಾಕೆಂದರೆ ಮೂರನೇ ಯುದ್ಧದಲ್ಲಿಯೇ ಈ ಭೂಮಿ ನಾಶವಾಗುತ್ತದೆ ಎಂದು ನುಡಿದರು. ಈ ವೇಳೆ ಬಿ.ಪಿ ಆಚಾರ್‌ ಬರೆದ ಮಾನವ ಹಕ್ಕುಗಳ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಕಾಲೇಜು ಮಕ್ಕಳಿಂದ ಮಾನವ ಹಕ್ಕು ಕುರಿತು ಪ್ಯಾನೆಲ್‌ ಡಿಸ್ಕಷನ್‌, ರಸಪ್ರಶ್ನೆ, ಬಹುಮಾನ ವಿತರಣೆ ನಡೆಯಿತು. 


ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್‌ ಕುಡ್ಪಿ ಅರವಿಂದ ಶೆಣೈ ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಸಂಯೋಜಕ ಎಡ್ವಿನ್‌ ವಾಲ್ಟರ್‌ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಂಎಚ್‌ ಕರುಣಾಕರ್‌, ಬಿ.ಎಸ್.‌ರೈ, ಕೆ.ಚಂದ್ರಮೋಹನ್‌ ರಾವ್, ಪ್ರಜ್ವಲ್‌ ಯು.ಎಸ್.‌, ಎಂ.ಟಿ.ರಾಜಾ, ಜ್ಯೋತಿ ಎಸ್.‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಆಶಾ ಚಂದ್ರಮೋಹನ್ ಕಾರ್ಯಕ್ರಮ ನಿರೂಪಿಸಿದರು.