ಪತ್ನಿಯಿಂದ ರಹಸ್ಯ ಮುಚ್ಚಿಟ್ಟು ಪತಿ ಮಾಡಿದ ತಪ್ಪಿಗೆ ಕೋರ್ಟ್ ನೀಡಿದ ತೀರ್ಪು ಏನು ಗೊತ್ತೇ..?


ಬೀಜಿಂಗ್: ಕೆಲವರು ತಮ್ಮ ಎಲ್ಲಾ ರಹಸ್ಯಗಳನ್ನು ತಮ್ಮ ಪತ್ನಿಯರೊಂದಿಗೆ ಹಂಚಿಕೊಳ್ಳುವುದಿಲ್ಲ. ಪತ್ನಿಗೆ ತಿಳಿಯದಂತೆ ಕೆಲವು ರಹಸ್ಯಗಳನ್ನು ನಿರ್ವಹಣೆ ಮಾಡುತ್ತಿರುತ್ತಾರೆ. ಅಲ್ಲದೆ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುತ್ತಾರೆ. ಹೀಗೆ ಪತ್ನಿಯನ್ನು ಯಾಮಾರಿಸುತ್ತಿರುವ ಪತಿ ಒಂದು ವೇಳೆ ಪತ್ನಿಯ ಎದುರು ಸಿಕ್ಕಿಬಿದ್ದರೆ ಏನಾಗಲಿದೆ ಎಂಬುದಕ್ಕೆ ಚೀನಾದಲ್ಲಿ ನಡೆದ ಈ ಘಟನೆಯೇ ತಾಜಾ ಉದಾಹರಣೆ.

ಝೌ ಎಂಬ ಉಪನಾಮ ಹೊಂದಿರುವ ಚೀನಾದ ವ್ಯಕ್ತಿಯೋರ್ವರಿಗೆ ಇತ್ತೀಚೆಗೆ ಲಾಟರಿಯಲ್ಲಿ 10 ಮಿಲಿಯನ್ ಯುವಾನ್ (12.39 ಕೋಟಿ ರೂ.) ಬಹುಮಾನವಾಗಿ ಬಂದಿತ್ತು. ತೆರಿಗೆ ಕಡಿತದ ಬಳಿಕ 8.34 ಮಿಲಿಯನ್ ಯುವಾನ್ (10.15 ಕೋಟಿ ರೂ.) ಪಡೆದುಕೊಂಡಿದ್ದ. ಆದರೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದಿರುವ ವಿಚಾರವನ್ನು ಝೌ, ತನ್ನ ಮಡದಿಗೆ ಹೇಳದೆ ರಹಸ್ಯವಾಗಿ ಇಟ್ಟುಕೊಂಡಿದ್ದ. ಅಲ್ಲದೆ ಬಹುಮಾನದ ಹಣ ಬ್ಯಾಂಕ್ ಖಾತೆಗೆ ಜಮಾ ಆದ ಬಳಿಕ ಅದರಲ್ಲಿ 2.41 ಕೋಟಿ ರೂ. ತನ್ನ ಅಕ್ಕನ ಖಾತೆಗೆ ವರ್ಗಾವಣೆ ಮಾಡಿದ್ದ. ಇದಾದ ಕೆಲವು ದಿನಗಳ ಬಳಿಕ 1,03,000 ಯುವಾನ್ (13 ಲಕ್ಷ ರೂ.) ಅನ್ನು ತನ್ನ ಮಾಜಿ ಪತ್ನಿಗೆ ಜಮಾ ಮಾಡಿದ್ದ. ಆಕೆ ಫ್ಲ್ಯಾಟ್ ಒಂದನ್ನು ಖರೀದಿ ಮಾಡಲು ಸಹಾಯ ಮಾಡಿದ್ದ.

ಆದರೆ ಕೆಲ ದಿನಗಳ ಬಳಿಕ ಪತಿ ಝೌ ಮಾಡಿರುವ ವಂಚನೆ ಆತನ ಪತ್ನಿ ಲಿನ್‌ಗೆ ತಿಳಿಯಿತು. ಈ ವಿಚಾರ ತಿಳಿದು ಲಿನ್ ಗೆ ಪತಿಯ ಮೇಲೆ ಎಲ್ಲಿಲ್ಲದ ಕೋಪ ಬಂದಿತ್ತು. ಆಕೆ ತಕ್ಷಣ ಪತಿಗೆ ತನಗೆ ಡಿವೋರ್ಸ್ ಕೊಡುವಂತೆ ಕೇಳಿದಳು. ಅಲ್ಲದೆ ವಿಚ್ಛೇದನೆ ಇತ್ಯರ್ಥವಾಗುವ ಬದಲು ತನಗೆ ನ್ಯಾಯ ದೊರಕಿಸಿಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು. ಝೌ ಅವರ ಸಹೋದರಿ ಮತ್ತು ಮಾಜಿ ಪತ್ನಿಗೆ ಕಳುಹಿಸಲಾದ ಹಣ ಸೇರಿದಂತೆ ಒಟ್ಟು 2.7 ಮಿಲಿಯನ್ ಯುವಾನ್‌ನಲ್ಲಿ ಮೂರನೇ ಎರಡರಷ್ಟು ಹಣವನ್ನು ತನಗೆ ಪಾವತಿಸಲು ಆದೇಶಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದಳು.

ಲಾಟರಿಯಲ್ಲಿ ಗೆದ್ದ ಹಣದ ಮೇಲೆ ದಂಪತಿಗೆ ಸಮಾನ ಹಕ್ಕಿದೆ ಮತ್ತು ಅದು ಜಂಟಿ ಆಸ್ತಿಯಾಗಲಿದೆ. ಇಲ್ಲಿ ಅದನ್ನು ಝೌ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಬಳಿಕ ಲಾಟರಿಯಲ್ಲಿ ಬಂದ ಬಹುಮಾನದ ಹಣದಲ್ಲಿ ಶೇ. 60 ರಷ್ಟು ಹಣ (ಸುಮಾರು 6 ಕೋಟಿ ರೂ.) ವನ್ನು ಪತ್ನಿ ಲಿನ್‌ಗೆ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ.

ಹೆಂಡತಿಯಿಂದ ಲಾಟರಿ ಬಹುಮಾನವನ್ನು ಮರೆಮಾಡುವುದು ಚೀನಾದಲ್ಲಿ ತಪ್ಪಲ್ಲ. ಆದರೆ, ಝೌ ಲಾಟರಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಘಟನೆ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ನೀವು ಕೂಡ ನಿಮ್ಮ ಹೆಂಡತಿಯಿಂದ ಯಾವುದೇ ರಹಸ್ಯವನ್ನು ಮರೆಮಾಡಲು ಬಯಸಿದರೆ, ಎರಡು ಬಾರಿ ಯೋಚಿಸುವುದು ಒಳ್ಳೆಯದು!