ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ತಮ್ಮ ಮಾಡಿದ ತಪ್ಪಿಗೆ ಅಣ್ಣನಿಗೆ ಶಿಕ್ಷೆ: ಹುಡುಗಿಯೊಂದಿಗೆ ಎಸ್ಕೇಪ್ ಆದ ತಮ್ಮನನ್ನು ಪತ್ತೆಹಚ್ಚಲು ಅಣ್ಣನನ್ನು ಅಪಹರಿಸಿ ಚಿತ್ರಹಿಂಸೆ


ಬೆಂಗಳೂರು: ಪ್ರೀತಿ ಕಾರಣಕ್ಕೆ ನಡೆಯುವ ಅವಾಂತರಗಳನ್ನು ದಿನನಿತ್ಯ ನಾವು ನೋಡುತ್ತಿರುತ್ತೇವೆ. ಇದೀಗ ತಮ್ಮ ತನ್ನ ಪ್ರೇಯಸಿಯೊಂದಿಗೆ ಊರು ಬಿಟ್ಟು ಓಡಿ ಹೋದದ್ದಕ್ಕೆ ಯಾವುದೇ ತಪ್ಪು ಮಾಡದ ಆತನ ಅಣ್ಣನನ್ನೇ ಹುಡುಗಿ ಕಡೆಯವರು ಕಿಡ್ನ್ಯಾಪ್ ಮಾಡಿ ಮೃಗೀಯವಾಗಿ ಚಿತ್ರಹಿಂಸೆ ನೀಡಿದ ಘಟನೆ ಬೆಂಗಳೂರಿನ ಕನಕಪುರ ರಸ್ತೆಯ ಬ್ಯಾಡರಹಳ್ಳಿಯಲ್ಲಿ ನಡೆದಿದೆ.


ಸಂತ್ರಸ್ತ ಕೊಟ್ರೇಶಿ ವೃತ್ತಿಯಲ್ಲಿ ದೇವಸ್ಥಾನದ ಅರ್ಚಕರು. ದೇವಸ್ಥಾನ, ಪೂಜೆ ಪುನಸ್ಕಾರ ಎಂದೇ ಬದುಕುತ್ತಿದ್ದವರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಒಂದು ದಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಹಠಾತ್ತನೆ ಬಂದ ಗ್ಯಾಂಗ್ ಒಂದು ಬಂದು ಅವರನ್ನು ಅಪಹರಿಸಿದೆ. ಅಲ್ಲಿಂದ ಶುರುವಾಗಿದ್ದೇ ನರಕಯಾತನೆ.


ಕೊಟ್ರೇಶಿಯವರ ತಮ್ಮ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಮನೆಯವರ ವಿರೋಧದ ನಡುವೆಯೂ ವಾರದ ಹಿಂದೆಯೇ ಊರು ಬಿಟ್ಟು ಓಡಿ ಹೋಗಿದ್ದರು. ಈ ವಿಷಯದಿಂದ ಕೆರಳಿದ ಯುವತಿಯ ಪೋಷಕರು ಮತ್ತು ಸಂಬಂಧಿಕರು, ತಮ್ಮನ ಇರುವಿಕೆಯನ್ನು ಪತ್ತೆಹಚ್ಚಲು ಅಣ್ಣ ಕೊಟ್ರೇಶಿಯನ್ನು ಗುರಿಯಾಗಿಸಿಕೊಂಡರು. ‘ನಿಮ್ಮ ತಮ್ಮನನ್ನು ಕರೆಸು, ಇಲ್ಲದಿದ್ದರೆ ನಿನ್ನ ಪ್ರಾಣ ತೆಗೆಯುತ್ತೇವೆ’ ಎಂದು ಬೆದರಿಸಿ ಕೈಕಾಲು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ.

ಕಿಡ್ನ್ಯಾಪ್ ಮಾಡಿದ ಆರೋಪಿಗಳು ಕ್ರೌರ್ಯದ ಪರಮಾವಧಿ ಮೆರೆದಿದ್ದಾರೆ. ಅರ್ಚಕ ಕೊಟ್ರೇಶಿಗೆ ಹೊಡೆಯುತ್ತಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಅದನ್ನು ಅವರ ಕುಟುಂಬ ಸದಸ್ಯರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ವಿಡಿಯೋ ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಕಾರ್ಯಪ್ರವೃತ್ತರಾಗುತ್ತಿದ್ದಂತೆ ವಿಷಯ ತಿಳಿದ ಕಿಡ್ನ್ಯಾಪರ್ಸ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕುಟುಂಬದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.