ಮಂಗಳೂರು: ವೈದ್ಯರ ಗಾಂಜಾ ಘಾಟು ಪ್ರಕರಣದಲ್ಲಿ ಮತ್ತಿಬ್ಬರು ಅರೆಸ್ಟ್


ಮಂಗಳೂರು: ವೈದ್ಯರು ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಗಾಂಜಾ ಸೇವನೆ, ಪೆಡ್ಲಿಂಗ್ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ವೈದ್ಯ ಹಾಗೂ ವೈದ್ಯಕೀಯ ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 15ಕ್ಕೆ ಏರಿದೆ.

ಮೂಲತಃ ಬೆಂಗಳೂರು ಹಲ್ಸೂರು ನಿವಾಸಿ, ನಗರದ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಮಾಡುತ್ತಿರುವ ವೈದ್ಯ ಡಾ.ಬಾಲಾಜಿ (29), ಮೂಲತಃ ಆಂಧ್ರಪ್ರದೇಶದ ಅನಸ್ತೇಶಿಯಾ ಸ್ನಾತ್ತಕೋತ್ತರ ಪದವಿ ಪಡೆಯುತ್ತಿರುವ ಡಾ‌.ರಾಘವ ದತ್ತಾ(28) ಬಂಧಿತ ಆರೋಪಿಗಳು.

ಬಂಧಿತನಾಗಿರುವ ವೈದ್ಯ ಡಾ‌.ಬಾಲಾಜಿಯು ಫಳ್ನೀರ್ ನಲ್ಲಿ ತಾನು ವಾಸ್ತವ್ಯವಿದ್ದ ಮನೆಯಲ್ಲಿಯೇ ಸಣ್ಣಮಟ್ಟಿನ ಪಾರ್ಟಿ ಆಯೋಜಿಸಿ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುತ್ತದೆ‌ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದರು.

ವೈದ್ಯಕೀಯ ವಿದ್ಯಾರ್ಥಿಗಳ, ವೈದ್ಯರ ಗಾಂಜಾ ಘಾಟು ಪ್ರಕರಣದಲ್ಲಿ ಈಗಾಗಲೇ 10 ಮಂದಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿತ್ತು. ಈ ಗಾಂಜಾ ಘಾಟು ಪ್ರಕರಣದ ಕಿಂಗ್ ಪಿನ್, ಯುಕೆ ಮೂಲದ ನೀಲ್ ಕಿಶೋರಿಲಾಲ್ ರಾಮ್ ಜಿಯನ್ನು ವಾರದ ಹಿಂದೆ ಬಂಟ್ಸ್ ಹಾಸ್ಟೆಲ್ ನ ಅಪಾರ್ಟ್‌ಮೆಂಟ್ ನಿಂದ ಬಂಧಿಸಲಾಗಿತ್ತು. ಈತ ಎನ್ಆರ್ ಐ ಕೋಟದಲ್ಲಿ ಮಂಗಳೂರಿನ ಮೆಡಿಕಲ್ ಕಾಲೇಜೊಂದರಲ್ಲಿ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಈತ ನೀಡಿರುವ ಮಾಹಿತಿಯ ಜಾಡು ಹಿಡಿದು ಹೊರಟ ಪೊಲೀಸರು ಇದರ ಹಿಂದಿರುವ ಭಾರೀ ದೊಡ್ಡ ಜಾಲವನ್ನೇ ಬೇಧಿಸಿದ್ದಾರೆ.




BREAKING NEWS
Loading latest news...
Join our WhatsApp Channel Powered By : Online Pudu