ಮೇಘಾಲಯ: ಕಾರಾಗೃಹದಿಂದ ತಪ್ಪಿಸಿಕೊಂಡ ಕೈದಿಗಳನ್ನು ಥಳಿಸಿ ಕೊಂದ ಗ್ರಾಮಸ್ಥರು
Monday, September 12, 2022
ಗುವಾಹಟಿ: ಜೋವಾಯಿಯ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿರುವ ಐವರು ವಿಚಾರಣಾಧೀನ ಕೈದಿಗಳ ಪೈಕಿ ನಾಲ್ವರನ್ನು ಮೇಘಾಲಯದ ಜೈನ್ತಿಯಾ ಹಿಲ್ಸ್‌ನ ಶಾಂಗ್‌ಪುಂಗ್ ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ ಎಂದು ವರದಿಯಾಗಿದೆ.
ಈ ಕೈದಿಗಳ ಮೇಲೆ ಗ್ರಾಮಸ್ಥರು ದಾಳಿ ಮಾಡಿರುವ ವೀಡಿಯೋಗಳು ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಕಾರಾಗೃಹದಿಂದ ತಪ್ಪಿಸಿಕೊಂಡ ಕೈದಿಗಳಿಗೆ ಗ್ರಾಮಸ್ಥರು ರಾಡ್ ಹಾಗೂ ದೊಣ್ಣೆಗಳಿಂದ ಥಳಿಸುತ್ತಿರುವುದನ್ನು ವಿಡಿಯೋಗಳಲ್ಲಿ ಕಂಡು ಬಂದಿದೆ. ಸೆ.10 ರಂದು ಜೋವಾಯಿ ಜಿಲ್ಲಾ ಕಾರಾಗೃಹದ ಸಿಬ್ಬಂದಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ತಂಡ ಆ ಬಳಿಕ ಅಲ್ಲಿಂದ ಪರಾರಿಯಾಗಿತ್ತು ಎನ್ನಲಾಗಿದೆ.
ಈ ತಂಡದಲ್ಲಿ 'ಐ ಲವ್ ಯೂ ತಲಾಂಗ್' ಎಂಬ ಕೊಲೆ ಆರೋಪಿಯೂ ಸೇರಿದಂತೆ ರಮೇಶ್ ದಖರ್, ಮರ್ಸಾಂಕಿ ತರಿಯಾಂಗ್, ರಿಕ್ಕೆನ್ಹಾಂಗ್ ಲಾಮಾರೆ, ಶಿಡೋರ್ಕಿ ದಖರ್ ಮತ್ತು ಲೋಡೆಸ್ಟಾರ್ ಟ್ಯಾಂಗ್ ಇದ್ದರೆಂದು ಗುರುತಿಸಲಾಗಿದೆ. ಬೆಳ್ಳಂಬೆಳಿಗ್ಗೆ 2 ಗಂಟೆ ಸುಮಾರಿಗೆ ಈ ಆರು ಕೈದಿಗಳು ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾರೆ ಎಂದು ಕಾರಾಗೃಹಗಳ ಇನ್ಸ್‌ಪೆಕ್ಟರ್ ಜನರಲ್ ಜೆಗ್ರಿ ಎಫ್‌ಕೆ ಮಾರಾಕ್ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
ಪರಾರಿಯಾದ ಈ ಕೈದಿಗಳು ಶಾಂಗ್‌ಪುಂಗ್ ಪ್ರದೇಶದ ಕಾಡಿನಲ್ಲಿ ಅಡಗಿಕೊಂಡಿದ್ದರು. ಇವರಲ್ಲೊಬ್ಬ ಆಹಾರ ಖರೀದಿಸಲು ಸ್ಥಳೀಯ ಚಹಾ ಅಂಗಡಿಗೆ ಹೋದಾಗ ಅಲ್ಲಿದ್ದವರು ಆತನನ್ನು ಗುರುತಿಸಿದ್ದಾರೆ. ಕೈದಿಗಳು ಅರಣ್ಯದಲ್ಲಿ ಇರುವ ವಿಚಾರ ಇಡೀ ಗ್ರಾಮಕ್ಕೆ ತಿಳಿದು ಅರಣ್ಯಕ್ಕೆ ಓಡಿಹೋದ ಕೈದಿಗಳನ್ನು ಬೆನ್ನಟ್ಟಿದ್ದಾರೆ. ಬಳಿಕ ಗ್ರಾಮಸ್ಥರು ಆ ಪ್ರದೇಶವನ್ನು ಸುತ್ತುವರೆದು. ಅವರನ್ನು ಸೆರೆಹಿಡಿದ ಬಳಿಕ ಥಳಿಸಿ ಕೊಂದಿದ್ದಾರೆ ಎನ್ನಲಾಗಿದೆ.