ಬಾರ್ ಬಿಲ್ ಪಾವತಿ ವಿಚಾರದಲ್ಲಿ ಜಗಳ: ಹೆಣವಾದ ಬುದ್ಧಿವಾದ ಹೇಳಿದ ಕ್ಯಾಬ್ ಚಾಲಕ

ಬೆಂಗಳೂರು: ಬಾರ್‌ನಲ್ಲಿ ಮದ್ಯ ಸೇವನೆ ಮಾಡಿ ಬಿಲ್ ಪಾವತಿ ಮಾಡುವ ವಿಚಾರದಲ್ಲಿ ನಡೆದಿರುವ ಜಗಳ ಕ್ಯಾಬ್ ಚಾಲಕನ ಕೊಲೆಯಲ್ಲಿ ಅಂತ್ಯವಾಗಿದೆ. 

ಇಂದಿರಾನಗರದ ಅಪ್ಪರೆಡ್ಡಿಪಾಳ್ಯದ ಪ್ರಕಾಶ್ ( 28 ) ಮೃತಪಟ್ಟ ಕ್ಯಾಬ್ ಚಾಲಕ. ಕೊಲೆ ಮಾಡಿರುವ ಆರೋಪದ ಮೇಲೆ ಮಂಜುನಾಥ್ ಎಂಬ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. 

ಪ್ರಕಾಶ್ ಹಾಗೂ ಆತನ ಸ್ನೇಹಿತರು ಜು .27ರ ರಾತ್ರಿ 10.30ಕ್ಕೆ ಇಂದಿರಾನಗರದ ಡಬಲ್ ರಸ್ತೆಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಮದ್ಯ ಸೇವನೆಗೆಂದು ಹೋಗಿದ್ದಾರೆ. ಇದೆ ವೇಳೆ ಆರೋಪಿಗಳು ಸಹ ಮದ್ಯ ಸೇವನೆ ಮಾಡುತ್ತಿದ್ದರು. ಸ್ವಲ್ಪ ಹೊತ್ತಿಗೆ ಆರೋಪಿಗಳು ಬಾರ್ ಕ್ಯಾಷಿಯರ್ ಬಳಿ ಬಿಲ್ ಪಾವತಿ ವಿಚಾರದಲ್ಲಿ ಜಗಳಕ್ಕಿಳಿದಿದ್ದಾರೆ. ಪ್ರಕಾಶ್ ಆರೋಪಿಗಳಲ್ಲಿ ಬಿಲ್ ಪಾವತಿ ಮಾಡುವಂತೆ ಆರೋಪಿಗಳಿಗೆ ಬುದ್ಧಿವಾದ ಹೇಳಿದ್ದಾನೆ.

ಬಳಿಕ ಆತ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಹೊರಟು ಬಂದಿದ್ದಾನೆ. ಆದರೆ ದೂಪನಹಳ್ಳಿ ಸಮೀಪ ಬೈಕ್‌ನಲ್ಲಿ ಬಂದ ಆರೋಪಿಗಳು, ಪ್ರಕಾಶ್ ಮತ್ತು ಆತನ ಸ್ನೇಹಿತರನ್ನು ತಡೆದು ಜಗಳ ತೆಗೆದಿದ್ದಾರೆ. ಬಾರ್‌ನಲ್ಲಿ ಬಿಲ್ ಕೊಡುವಂತೆ ಬುದ್ಧಿವಾದ ಹೇಳುತ್ತೀಯ ಎಂದು ಹಲ್ಲೆ ನಡೆಸಿ ಜೈಕುಮಾರ್ ಮತ್ತು ಆತನ ಸ್ನೇಹಿತರು ಮಾರಕಾಸ್ತ್ರದಿಂದ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗಿನ ಜಾವ ಪ್ರಕಾಶ್ ಮೃತಪಟ್ಟಿದ್ದಾನೆ.

ಪ್ರಕಾಶ್ ಮೃತಪಡುವುದಕ್ಕಿಂತ ನೀಡಿರುವ ಹೇಳಿಕೆ ಆಧಾರದ ಮೇಲೆ‌ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಬಗ್ಗೆ ಇಂದಿರಾನಗರ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿ ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.