ಪಾಕ್ ನಲ್ಲಿ ಹಿಂದೂ ಸಹೋದರಿಯರಿಬ್ಬರಿಗೆ ಗನ್ ಪಾಯಿಂಟ್ ಇಟ್ಟು ಅತ್ಯಾಚಾರ ಎಸಗಿದ ದುಷ್ಕರ್ಮಿಗಳು

ಇಸ್ಲಾಮಾಬಾದ್‌: ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಬೊಬ್ಬೆ ಹೊಡೆಯುವ ಪಾಕಿಸ್ತಾನಕ್ಕೆ ತನ್ನ ನೆಲದಲ್ಲಿ ಆಗುತ್ತಿರುವ ಹೀನ ಕೃತ್ಯವು ಕಾಣುವುದೇ ಇಲ್ಲ. ಪಾಕ್ ನಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಯುವತಿಯರ ಮೇಲಿನ ಪದೇ ಪದೇ ಅತ್ಯಾಚಾರ ಎಸಗಲಾಗುತ್ತಿದೆ.

ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ. 16 ಹಾಗೂ 17 ವರ್ಷದ ಇಬ್ಬರು ಹಿಂದೂ ಸಹೋದರಿಯರ ಮೇಲೆ ಕಾಮುಕರಿಬ್ಬರು ಗನ್‌ ಪಾಯಿಂಟ್‌ ಇರಿಸಿ ಅತ್ಯಾಚಾರ ಎಸಗಿದ್ದಾರೆ. ಪಂಜಾಬ್ ಪ್ರಾಂತ್ಯದ ಫೋರ್ಟ್‌ ಅಬ್ಬಾಸ್ ನಗರದ ಬಹಾವಲ್‌ ನಗರ್‌ನಲ್ಲಿ ವಾಸವಾಗಿದ್ದ ಈ ಸಹೋದರಿಯರಿಬ್ಬರು ಜೂ. 5ರಂದು ಮನೆಯಿಂದ ಬಹಿರ್ದೆಸೆಗಾಗಿ ತೆರಳಿದ್ದರು. ಈ ವೇಳೆ ಉಮೈರ್‌ ಅಶ್ಫಾಕ್‌ ಹಾಗೂ ಕಾಶಿಫ್ ಅಲಿ ಎಂಬಿಬ್ಬರು ಯುವತಿಯರಿಗೆ ಪಿಸ್ತೂಲು ತೋರಿಸಿ ಹೀನ ಕೃತ್ಯವೆಸಗಿ ಪರಾರಿಯಾಗಿದ್ದಾರೆ.

ಪ್ರಕರಣದಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪ ಇರುವುದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಾರೆ. ಜತೆಗೆ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಗೊಳಿಸುವಂತೆ ಯುವತಿಯರ ಕುಟುಂಬದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.