
ಪತಿಯ ಮನೆಯಲ್ಲಿ ಶೌಚಾಲಯವಿಲ್ಲವೆಂದು ನವವಿವಾಹಿತೆ ಆತ್ಮಹತ್ಯೆಗೆ ಶರಣು
5/10/2022 09:04:00 PM
ಕಡಲೂರು(ತಮಿಳುನಾಡು): ಪತಿಯ ಮನೆಯಲ್ಲಿ ಶೌಚಾಲಯವೇ ಇಲ್ಲವೆಂದು ಮನನೊಂದ ನವವಿವಾಹಿತೆಯೋರ್ವಳು ನೇಣಿಗೆ ಶರಣಾಗಿರುವ ದುರಂತವೊಂದು ತಮಿಳುನಾಡಿನಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ರಮ್ಯಾ(27) ಎಂಬ ಈ ಯುವತಿ ಕಾರ್ತಿಕೇಯನ್ ಎಂಬಾತನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇವರಿಬ್ಬರ ಮದುವೆ ಎ. 6ರಂದು ನಡೆದಿತ್ತು. ಆದರೆ ಕಾರ್ತಿಕೇಯನ್ ಮನೆಯಲ್ಲಿ ಶೌಚಾಲಯವಿರಲಿಲ್ಲ. ಇದರಿಂದ ಎಪ್ರಿಲ್ 7ರಂದು ರಮ್ಯಾ ಮರಳಿ ತವರು ಮನೆಗೆ ಹೋಗಿದ್ದಾಳೆ. ಆ ಬಳಿಕವಾದರೂ ಕಾರ್ತಿಕೇಯನ್ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿರಲಿಲ್ಲ. ಇದೇ ವಿಚಾರವಾಗಿ ಪತಿ - ಪತ್ನಿ ನಡುವೆ ತೀವ್ರ ವಾಗ್ವಾದ ಉಂಟಾಗಿದೆ. ಈ ಸಂದರ್ಭ ರಮ್ಯಾಳನ್ನು ಕಾರ್ತಿಕೇಯನ್ ಕೆಟ್ಟದಾಗಿ ನಿಂದಿಸಿದ್ದಾನೆ ಎನ್ನಲಾಗಿದೆ.
ಪರಿಣಾಮ ಮನನೊಂದ ರಮ್ಯಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ತಕ್ಷಣವೇ ರಮ್ಯಾಳನ್ನು ಮನೆಯವರು, ಸ್ಥಳೀಯರು ಕಡಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ, ಹೆಚ್ಚಿನ ಚಿಕಿತ್ಸೆಗೋಸ್ಕರ ಪುದುಚೇರಿ ಜಿಪ್ಮರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ದುರದೃಷ್ಟವಶಾತ್ ರಮ್ಯಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಘಟನೆ ನಡೆದ ಬೆನ್ನಲ್ಲೇ ರಮ್ಯಾ ತಾಯಿ ಮಂಜುಳಾ ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.