ವಂಚಕ ಭಾವೀ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ ಲೇಡಿ ಪೊಲೀಸ್!

ಡಿಸ್ಪುರ್: ತಾನು ವಿವಾಹವಾಗಲು ಬಯಸಿದ್ದಾದ ವಂಚಕನೆಂದು ತಿಳಿದುಕೊಂಡ ಲೇಡಿ ಸಬ್ ಇನ್ ಸ್ಪೆಕ್ಟರ್ ಭಾವಿಪತಿ ವಿರುದ್ಧವೇ ಎಫ್‍ಐಆರ್ ದಾಖಲಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ವಂಚಕ ರಾಣಾ ಪೊಗಾಗ್ ಬಂಧಿತ ಆರೋಪಿ.

ಈತ ತಾನು ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‍ಜಿಸಿ)ನಲ್ಲಿ ವೃತ್ತಿ ನಿರ್ವಹಿಸುತ್ತಿದ್ದೇನೆಂದು ಎಲ್ಲರನ್ನು ನಂಬಿಸಿದ್ದನು. ಅಷ್ಟೇ ಅಲ್ಲದೇ ಒಎನ್‍ಜಿಸಿನಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದನು ಎನ್ನಲಾಯ. ಆದರೆ ಈತನ ಅಸಲಿ ಮುಖವಾಡ ಬಯಲಾಗುತ್ತಿದ್ದಂತೆ ಪೊಗಾಗ್‍ನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಪೊಗಾಗ್‍, ಅಸ್ಸಾಂನ ನಾಗಾಂವ್ ಜಿಲ್ಲೆಯ ಠಾಣೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಎಂಬಾಕೆಯೊಂದಿಗೆ ತಾನು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಮಾಡಿಕೊಂಡಿದ್ದ. ಬಳಿಕ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ನವೆಂಬರ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು.

ಆದರೆ ಇದೀಗ ಆತ ವಂಚಕನೆಂದು ತಿಳಿದ ತಕ್ಷಣ ಜುನ್ಮೋನಿ, ಆತನ ವಿರೋಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿರುವ ಜುನ್ಮೋನಿ, ರಾಣಾ ಪೊಗಾಗ್ ವಂಚಕ ಎಂದು ನನಗೆ ಮಾಹಿತಿ ಕೊಟ್ಟ ಮೂರು ಜನರಿಗೆ ನಾನು ಆಭಾರಿಯಾಗಿದ್ದೇನೆ. ಅವರು ನನ್ನ ಕಣ್ಣುಗಳನ್ನು ತೆರೆಸಿದರು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಸದ್ಯ ಆತ ಕೋಟ್ಯಂತರ ರೂ‌. ಹಣವನ್ನು ಸಾರ್ವಜನಿಕರಿಗೆ ವಂಚಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.