
ಕೋಮುವಾದಿ ಶಕ್ತಿಗಳ ಸುದ್ದಿಗಳನ್ನು ವಿಜೃಂಭಿಸಿ ಪ್ರಚಾರ ಕೊಡದಿರಿ: ಯು.ಟಿ.ಖಾದರ್ ಮಾಧ್ಯಮಗಳಿ ಸಲಹೆ
4/11/2022 10:11:00 AM
ಕೋಮುವಾದಿ ಶಕ್ತಿಗಳು ರಾಜ್ಯ ಹಾಗೂ ಜಿಲ್ಲೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಆದರೆ ಮಾಧ್ಯಮ ಇಂತಹ ವಿಚಾರಗಳಿಗೆ ಹೆಚ್ಚಿನ ಪ್ರಚಾರ ನೀಡದೆ ನಿರ್ಲಕ್ಷ್ಯ ಮಾಡಿ ಸುದ್ದಿ ಮಾಡದಿದ್ದಲ್ಲಿ ಯಾರೂ ಇಂತಹ ಕೃತ್ಯ ಎಸಗಲು ಹೋಗುವುದಿಲ್ಲ ಎಂದು ವಿಶಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಮಾತನಾಡಿದ ಅವರು, ಹೆಸರೇ ಇರದ ಯಾರೋ ಒಬ್ಬ ಬ್ಯಾನರ್ ಹಾಕಿದವನಿಗೆ ಮಾಧ್ಯಮದವರು ಬಹಳಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಆದ್ದರಿಂದ ಕಷ್ಟಪಟ್ಟು ಸಮಾಜಮುಖಿ ಕೆಲಸ ಮಾಡುವ ಬದಲು ಮುಂದೆ ಪ್ರಚಾರ ಗಿಟ್ಟಿಸಲು ಅದೇ ಮಾಡತ್ತಾ ಇರಬಹುದು. ಬೇಡದ ಕೆಲಸ ಮಾಡಿದ ಅಂಥವರಿಗೆ 24 ಗಂಟೆ ಪ್ರಚಾರ ಕೊಟ್ಟು ರಾಷ್ಟ್ರೀಯ ನಾಯಕ ಮಾಡಲಾಗುತ್ತದೆ ಎಂದು ವ್ಯಂಗ್ಯವಾಡಿದರು.
ಆದ್ದರಿಂದ ಎರಡು ಸಲ ಇಂತಹ ಸುದ್ದಿಗಳನ್ನು ನಿರ್ಲಕ್ಷ್ಯ ಮಾಡಿದರೆ ತನ್ನಷ್ಟಕ್ಕೇ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಇದನ್ನು ನಮಗೋಸ್ಕರ ಮಾಡಬೇಡಿ. ಕಡೇ ಪಕ್ಷ ದೇಶಕ್ಕೋಸ್ಕರ ಆಗಿಯಾದರೂ ಮಾಡಿ. ಭಾರತ ಬದುಕಿದರೆ ಮಾತ್ರ ಭಾರತೀಯರು ಬದುಕಲು ಸಾಧ್ಯ. ಕರ್ನಾಟಕ ಬದುಕಿದರೆ ಕನ್ನಡಿಗರು ಬದುಕಬಹುದು. ಆದ್ದರಿಂದ ಸರಕಾರದೊಂದಿಗೆ ಮಾಧ್ಯಮಕ್ಕೆ ವಿಶೇಷ ಜವಾಬ್ದಾರಿಯಿದೆ. ಮಾಧ್ಯಮದವರು ಒಂದು ತಿಂಗಳು ಕೋಮುಶಕ್ತಿಗಳ ಯಾವುದೇ ಸುದ್ದಿಗಳನ್ನು ಪ್ರಕಟಿಸಬೇಡಿ. ಬೆಲೆಯೇರಿಕೆಯ ವಿಚಾರವನ್ನು ಸುದ್ದಿ ಮಾಡಿದರೆ ಸರಕಾರ ಎಚ್ಚೆತ್ತು ಜನಸಾಮಾನ್ಯರಿಗೆ ಪ್ರಯೋಜನ ಆಗಬಹುದು. ಆದರೆ ಬೆಲೆಯೇರಿಕೆ ಬಗ್ಗೆ ಯಾವುದೇ ಮಾಧ್ಯಮದವರು ಚಕಾರ ಎತ್ತುತ್ತಿಲ್ಲ. ಎಲ್ಲವೂ ಸರಿಯಾಗುತ್ತದೆ ಎಂದು ಯು.ಟಿ.ಖಾದರ್ ಹೇಳಿದರು.