ತಾನೇ ಹೆಣೆದ ಬಲೆಯಲ್ಲಿ ತಗ್ಲಾಕ್ಕೊಂಡ ತಮಿಳುನಾಡು ಬಿಜೆಪಿ ನಾಯಕ: ಆಭರಣದಾಸೆಗೆ ಕಾರಿಗೆ ಬೆಂಕಿ ಹಚ್ಚಿ ಪೊಲೀಸ್ ಅತಿಥಿಯಾದ!

ಚೆನ್ನೈ: ತಮ್ಮ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ದೂರು ನೀಡಿದ್ದ ತಮಿಳುನಾಡು ರಾಜ್ಯದ ಪಶ್ಚಿಮ ತಿರುವಳ್ಳೂರ್‌ ಜಿಲ್ಲೆಯ ಬಿಜೆಪಿ ಘಟಕದ ಕಾರ್ಯದರ್ಶಿ ಸತೀಶ್‌ ಕುಮಾರ್‌ ಅವರೇ ತಮ್ಮ ಕಾರಿಗೆ ತಾವೇ ಬೆಂಕಿ ಹಚ್ಚಿದ್ದಾರೆಂದು ತನಿಖೆಯಿಂದ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಅವರೀಗ‌ ಪೊಲೀಸರ ಅತಿಥಿಯಾಗಿದ್ದಾರೆ.

ಇತ್ತೀಚೆಗೆ, ಸತೀಶ್‌ ಕುಮಾರ್‌ ಚೆನ್ನೈನಲ್ಲಿರುವ ತಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿಗೆ ಯಾರೋ ಬೆಂಕಿ ಹಚ್ಚಿರುವುದಾಗಿ ಪೊಲೀಸ್ ದೂರು ದಾಖಲಿಸಿದ್ದರು. ಆದರೆ, ತನಿಖೆಯಲ್ಲಿ ಅವರೇ ಕಾರಿಗೆ ಬೆಂಕಿ ಹಚ್ಚಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. 

ಸತೀಶ್‌ ಕುಮಾರ್ ಪತ್ನಿ ಚಿನ್ನಾಭರಣ ಕೊಡಿಸಲು ಬಹಳ ದಿನಗಳಿಂದ ಪೀಡಿಸುತ್ತಿದ್ದರಂತೆ. ಆದರೆ, ಹಣದ ಕೊರತೆಯಿದ್ದ ಪರಿಣಾಮ ಆಕೆಯ ಬಯಕೆಯನ್ನು ತೀರಿಸಲು ಸತೀಶ್‌ ಕುಮಾರ್ ಹೊಸ ಐಡಿಯಾವೊಂದನ್ನು ಮಾಡಿದ್ದಾರೆ.

ಅವರು ಮಾಡಿದ್ದೇನೆಂದರೆ, ತಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿಗೆ ತಾವೇ ಬೆಂಕಿಯಿಟ್ಟು ಮನೆಯೊಳಗೆ ಹೋಗಿದ್ದರು. ಬಳಿಕ ಯಾರೋ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದು ಹೋಗಿ ತಮ್ಮ ಕಾರು ಸುಟ್ಟುಹೋಗಿದೆ ಎಂದು ಪೊಲೀಸ್ ದೂರು ದಾಖಲಿಸಿದ್ದರು. ಸುಟ್ಟು ಹೋದ ಕಾರಿಗೆ ಬರುವ ವಿಮಾ ಪರಿಹಾರದ ಹಣದಲ್ಲಿ ಪತ್ನಿಗೆ ಆಭರಣ ಕೊಡಿಸುವುದು ಸತೀಶ್‌ ಉದ್ದೇಶವಾಗಿತ್ತು.

ದೂರಿನನ್ವಯ ತನಿಖೆ ನಡೆಸಲು ಮುಂದಾದ ಪೊಲೀಸರು, ಸತೀಶ್‌ ಅಕ್ಕಪಕ್ಕದ ಮನೆಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಅವಲೋಕಿಸಿದ್ದಾರೆ. ಈ ಸಂದರ್ಭ ಸತೀಶ್‌ ಅವರೇ ಕಾರಿಗೆ ಬೆಂಕಿ ಹಚ್ಚಿರುವುದು ತಿಳಿದುಬಂದಿದೆ. ಸುಳ್ಳು ದೂರು ದಾಖಲಿಸಿದ ಆರೋಪದಡಿ ಅವರನ್ನು ಬಂಧಿಸಲಾಗಿದೆ.