-->
ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಆರೋಪಿ ಎನ್ ಕೌಂಟರ್ ಗೆ ಬಲಿ

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಆರೋಪಿ ಎನ್ ಕೌಂಟರ್ ಗೆ ಬಲಿ

ಗುವಾಹಟಿ: ಕೆಲವು ದಿನಗಳ ಹಿಂದೆ ಅಸ್ಸಾಂನ ಗುವಾಹಟಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್​ರೇಪ್​ ಪ್ರಕರಣ ಭಾರಿ ಸುದ್ದಿ ಮಾಡಿತ್ತು. ಇದೀಗ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರು ಎನ್​ಕೌಂಟರ್​ ಮಾಡಿದ್ದಾರೆ. 

16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಬಿಕಿ ಅಲಿ ಹಾಗೂ ಆತನ ನಾಲ್ವರು ಸ್ನೇಹಿತರು ಸಾಮೂಹಿಕ ಅತ್ಯಾಚಾರ​ ಎಸಗಿದ್ದರು. ಅಲ್ಲದೆ ಅತ್ಯಾಚಾರದ ವೀಡಿಯೋ ಚಿತ್ರೀಕರಣ ಮಾಡಿ, ಯಾರಿಗಾದರೂ ವಿಷಯವನ್ನು ತಿಳಿಸಿದರೆ ಅದನ್ನು ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದರು. ಆ ಬಳಿಕ ಮತ್ತೆ ತಮ್ಮ ಜೊತೆಗೆ ಬಂದರೆ ವೀಡಿಯೊವನ್ನು ಡಿಲೀಟ್​ ಮಾಡುವುದಾಗಿ ಭರವಸೆ ನೀಡಿ ಮತ್ತೆ ಗ್ಯಾಂಗ್ ರೇಪ್​ ಮಾಡಿದ್ದರು. 

ಈ ಬಗ್ಗೆ ಪ್ರಕರಣ ದಾಖಲಾಗಿ ಪೊಲೀಸರು ಆರೋಪಿ ಬಿಕಿ ಅಲಿಯನ್ನು ತನಿಖೆಗೆಂದು ಕರೆದೊಯ್ಯುತ್ತಿದ್ದರು. ಈ ಸಂದರ್ಭ ಆತ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಿಕಿ ಅಲಿ ಮೃತಪಟ್ಟಿದ್ದಾನೆ. 

ಈ ಗುಂಡಿನ ದಾಳಿಯಲ್ಲಿ ಗುವಾಹಟಿಯ ಪನ್‌ಬಜಾರ್ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ಟ್ವಿಂಕಲ್ ಗೋಸ್ವಾಮಿ ಕೂಡ ಗಾಯಗೊಂಡಿದ್ದಾರೆ. ಅವರ ಕಾಲು ಹಾಗೂ ಕೈಗೆ ಗಾಯಗಳಾಗಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಮಾತನಾಡಿರುವ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಅಭಿಜಿತ್ ಶರ್ಮಾ, ಆರೋಪಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆತನ ಎದೆ ಮತ್ತು ಹಿಂಭಾಗದಲ್ಲಿ ಮೂರು ಗಾಯಗಳಾಗಿತ್ತು. ಇದೀಗ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಗುಂಡಿನ ಗಾಯಗಳ ವಿವರಗಳು ಮರಣೋತ್ತರ ಪರೀಕ್ಷೆಯ ಬಳಿಕ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. 

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉಳಿದ ನಾಲ್ವರು ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article