ಮೆಕ್ಸಿಕೊ: ಆಕಾಶದಿಂದ ಹಠಾತ್ತನೆ ನೆಲಕ್ಕೆ ಬಿದ್ದು ನೂರಾರು ಹಕ್ಕಿಗಳು ಸಾವು; ಕಾರಣ ನಿಗೂಢ, ವೀಡಿಯೋ ವೈರಲ್

ಹೊಸದಿಲ್ಲಿ: ಹಕ್ಕಿಗಳ ಹಿಂಡೊಂದು ಏಕಾಏಕಿ ಆಗಸದಿಂದ ನಿಗೂಢವಾಗಿ ಭೂಮಿಗೆ ಬಿದ್ದು ಸತ್ತು ಬಿದ್ದಿರುವ ಘಟನೆ ಮೆಕ್ಸಿಕೋದ ಚಿಹುವಾಹುವಾ ಎಂಬಲ್ಲಿ ವರದಿಯಾಗಿದೆ.

ಹಳದಿ ಬಣ್ಣದ ತಲೆಯಿರುವ ನೂರಾರು ಕಪ್ಪು ಹಕ್ಕಿಗಳು ನೆಲಕ್ಕುರುಳಿದ ಘಟನೆ ಫೆಬ್ರವರಿ 7ರಂದು ನಡೆದಿತ್ತು. 
ಹಠಾತ್ತನೆ ನೆಲಕ್ಕೆ ಬಿದ್ದ ರಭಸಕ್ಕೆ ಇದರಲ್ಲಿ ಹಲವಾರು ಹಕ್ಕಿಗಳು ಮೃತಪಟ್ಟಿವೆ. ಈ ಕುರಿತಾದ ಸಿಸಿ ಕ್ಯಾಮರಾ ದೃಶ್ಯ ವೈರಲ್ ಆಗಿದೆ. ಈ ದೃಶ್ಯದಲ್ಲಿ ಫುಟ್ಪಾತ್ ಮೇಲೆ ಹಲವಾರು ಹಕ್ಕಿಗಳು ಸತ್ತು ಬಿದ್ದಿರುವುದನ್ನು ಕಂಡ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲವಾರು ಹಕ್ಕಿಗಳು ಅಲ್ಲಿನ ಮನೆಗಳ ಮೇಲ್ಛಾವಣಿಗಳ ಮೇಲೆ ಬಿದ್ದಿವೆ. ಕೆಲ ಪಕ್ಷಿಗಳು ಎದ್ದು ಮತ್ತೆ ಹಾರಿದರೆ ಸಾಕಷ್ಟು ಹಕ್ಕಿಗಳು ಸತ್ತು ಬಿದ್ದಿದೆ. ಟ್ವಿಟ್ಟರ್ ಹಾಗೂ ಫೇಸ್ಬುಕ್‍ನಲ್ಲಿ ಇದರ ವೀಡಿಯೋ ವೈರಲ್ ಆಗಿದೆ.

ಆದರೆ ಈ ಹಕ್ಕಿಗಳು ಹೀಗೆ ಹಠಾತ್ತನೆ ನೆಲಕ್ಕೆ ಬಿದ್ದು ಸತ್ತು ಬೀಳಲು ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ವಿಷಕಾರಕ ಹೊಗೆಗಳ ಪ್ರಭಾವದಿಂದ ಅಥವಾ ವಿದ್ಯುತ್ ತಂತಿಯ ಮೇಲೆ ಕುಳಿತ ಪರಿಣಾಮ ಹೀಗಾಗಿರಬಹುದೆಂದು ಕೆಲವರು ಅಂದಾಜಿಸಿದ್ದಾರೆ. ಇನ್ನು ಕೆಲವರು ಹಕ್ಕಿಗಳ ನಿಗೂಢ ಸಾವಿನ ಹಿಂದೆ 5ಜಿ ಇರಬಹುದು ಎಂದು ಶಂಕಿಸಿದ್ದಾರೆ. ಸಣ್ಣ ಹಕ್ಕಿಗಳ ಮೇಲೆ ದಾಳಿ ನಡೆಸುವ ಬೇರೆ ಹಕ್ಕಿಗಳಿಂದಾಗಿಯೂ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ಕೆಲ ತಜ್ಞರು ಊಹಿಸಿದ್ದಾರೆ. ಆದರೆ ನಿಖರ ಕಾರಣ ಮಾತ್ರ ಇನ್ನೂ ಸಿಗಲಿಲ್ಲ.