-->
ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಗೆ ಹಕ್ಕಿದೆ ಎಂದು ಹೇಳುವಂತಿಲ್ಲ: ದೆಹಲಿ ಹೈಕೋರ್ಟ್

ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಗೆ ಹಕ್ಕಿದೆ ಎಂದು ಹೇಳುವಂತಿಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: ವೈವಾಹಿಕ ಜೀವನದೊಳಗಿನ ಸಮ್ಮತವಿಲ್ಲದ ಲೈಂಗಿಕ ಕ್ರಿಯೆಯನ್ನು ಅಪರಾಧಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್​ ನ್ಯಾಯಮೂರ್ತಿ ಸಿ. ಹರಿ ಶಂಕರ್​, ಮದುವೆಯಾದ ಬಳಿಕ ಸ್ವೇಚ್ಛೆಯಿಂದ ಲೈಂಗಿಕ ಕ್ರಿಯೆಯನ್ನು ಮಾಡಬಹುದೆಂಬ ಎಷ್ಟೇ ನಿರೀಕ್ಷೆ ಇದ್ದರೂ, ನೀವು ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಸಂಭೋಗ ಹೊಂದುವ ಹಕ್ಕನ್ನು ಪಡೆದಿಲ್ಲ ಎಂದು ಆದೇಶಿಸಿದ್ದಾರೆ. 

ಕೋರ್ಟ್​ ಸಹಾಯಕಿ ವಕೀಲೆ ರೆಬೆಕಾ ಜಾನ್​ ಮಾತನಾಡಿ, ದಾಂಪತ್ಯದಲ್ಲಿ ಲೈಂಗಿಕ ಸಂಬಂಧದಲ್ಲಿ ನ್ಯಾಯಯುತವಾದ ನಿರೀಕ್ಷೆ ಇರುತ್ತದೆ. ಅದಕ್ಕೆ ದಂಡನೆ ನೀಡಲು ಆಗುವುದಿಲ್ಲ. ಆದರೆ ನಿರೀಕ್ಷೆಯು ಬಲತ್ಕಾರ ಹಾಗೂ ಬಲದ ಆಧಾರದ ಮೇಲೆ ದೈಹಿಕ ಕ್ರಿಯೆಯಾಗಿದ್ದರೆ, ಆ ಲೈಂಗಿಕ ಕ್ರಿಯೆಯು ಅಪರಾಧವಾಗಬೇಕು ಎಂದು ಕೋರ್ಟ್​ಗೆ ತಿಳಿಸಿದರು. 

ವೈವಾಹಿಕ ಸಂಬಂಧದಲ್ಲಿರುವ ಪ್ರತಿಯೊಬ್ಬ ಪುರುಷನನ್ನು ಶಿಕ್ಷಿಸಲು ಇಲ್ಲಿ ಪ್ರಯತ್ನ ಪಡುತ್ತಿಲ್ಲ. ಆದ್ದರಿಂದ ಸಂಬಂಧದಲ್ಲಿನ ಪ್ರತಿಯೊಂದು ಕ್ರಿಯೆಯೂ ಶಿಕ್ಷೆಗೆ ಗುರಿಯಾಗುವುದಿಲ್ಲ. ಆದರೆ, ಪತ್ನಿಯ ಒಪ್ಪಿಗೆಯ ವಿರುದ್ಧದ ಲೈಂಗಿಕ ಕ್ರಿಯೆಯು ಅಪರಾಧವಾಗಿದೆ. ಅದನ್ನು ಕಾನೂನಿನ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು. 

ಸದ್ಯ ದೆಹಲಿ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ವಿನಾಯಿತಿಯನ್ನು ಪ್ರಶ್ನಿಸುವ ಬಹು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಸೆಕ್ಷನ್​ 375 ಪ್ರಕಾರ ಪತಿಯು ತನ್ನ ಪತ್ನಿಯೊಂದಿಗೆ ಬಲವಂತದ ಲೈಂಗಿಕ ಸಂಭೋಗ ನಡೆಸಿದರೆ ಅದು ಅತ್ಯಾಚಾರದ ಅಪರಾಧದಿಂದ ವಿನಾಯಿತಿ ನೀಡುತ್ತದೆ. ಆದರೆ, ಪತ್ನಿಯ ವಯಸ್ಸು 15 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅರ್ಜಿದಾರರು ವೈವಾಹಿಕ ಅತ್ಯಾಚಾರ ವಿನಾಯಿತಿಯು ಸಾಂವಿಧಾನಿಕತೆಯನ್ನು ಪ್ರಶ್ನಿಸಿದ್ದು, ಇದು ತಮ್ಮ ಪತಿಯಿಂದ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ವಿವಾಹಿತ ಮಹಿಳೆಯರ ವಿರುದ್ಧ ತಾರತಮ್ಯವನ್ನು ತೋರಿಸುತ್ತದೆ. ಈ ಪ್ರಕರಣದ ಮುಂದಿನ ವಿಚಾರಣೆ ಇಂದು (ಜ.21) ನಡೆಯಲಿದೆ. 

Ads on article

Advertise in articles 1

advertising articles 2

Advertise under the article