8ರ ಬಾಲಕಿಯ ಮೇಲೆ ಕಾಮುಕನಿಂದ ಅತ್ಯಾಚಾರ: ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಅಶ್ಲೀಲ ವೀಡಿಯೋ ನೋಡುತ್ತಿದ್ದ ಆರೋಪಿ

ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 8 ವರ್ಷದ ಅಪ್ರಾಪ್ತೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. 

ಈ ದುಷ್ಕೃತ್ಯ ಉತ್ತರ ದೆಹಲಿಯ ಅಲಿಪುರ್​​ದಲ್ಲಿ ನಡೆದಿದ್ದು, ಆರೋಪಿ ಸಮೀರ್ ಎಂಬಾತನನ್ನು ಬಂಧನ ಮಾಡಲಾಗಿದೆ. ಪೊಲೀಸರು ಪೊಲೀಸರು ಆತನನ್ನು ಬಂಧನ ಮಾಡಲು ಬಂದ ವೇಳೆ ಆತ ಅಶ್ಲೀಲ ವೀಡಿಯೋ ವೀಕ್ಷಿಸುತ್ತಿದ್ದ ಎಂದು ತಿಳಿದು ಬಂದಿದೆ.

ಈ ಅಪ್ರಾಪ್ತ ಬಾಲಕಿ ನಿನ್ನೆ ಸಂಜೆ ತನ್ನ ಸಹೋದರಿಯೊಂದಿಗೆ ಊರ ಹೊರಗಿರುವ ದೇವಸ್ಥಾನಕ್ಕೆ ತೆರಳಿದ್ದಳು. ಈ ವೇಳೆ ಅಲ್ಲಿಗೆ ಸಮೀರ್​ ಬಂದಿದ್ದು, ಆತ ತನ್ನೊಂದಿಗೆ ಮನೆಗೆ ಬರುವಂತೆ ಬಾಲಕಿಯನ್ನು ಕರೆದಿದ್ದಾನೆ. ಸಮೀರ್​ನನ್ನು ತನ್ನ ತಂದೆಯ ಜೊತೆಗೆ ನೋಡಿರುವ ಕಾರಣ ಆತನೊಂದಿಗೆ ಬಾಲಕಿ ಹೋಗಿದ್ದಾಳೆ. ಹಾಗೆ ಕರೆದೊಯ್ದ ಆತ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಪರಾರಿಯಾಗಿದ್ದಾನೆ.

ಅಲ್ಲಿಂದ ಬಾಲಕಿ ಅಳುತ್ತಾ ದೇವಸ್ಥಾನಕ್ಕೆ ಬಂದಿದ್ದಾಳೆ. ಈ ವೇಳೆ ಸಂಬಂಧಿಕರಿಗೆ ಅತ್ಯಾಚಾರ ಎಸಗಿರುವುದು ತಿಳಿದು ಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ತಂಡ ರಚನೆ ಮಾಡಿ ಶೋಧಕಾರ್ಯ ನಡೆಸಿದಾಗ ಪೊಲೀಸರು ಸಿಸಿಟಿವಿ ದೃಶ್ಯಾವಳಿ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಸಮೀರ್ ದುಷ್ಕೃತ್ಯವೆಸಗಿರುವುದು ಗೊತ್ತಾಗಿದೆ. ತಕ್ಷಣವೇ ಆತನನ್ನು ಬಂಧನ ಮಾಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿರುವುದು ಕಂಡು ಬಂದಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu