Mangaluru: ಅಪರಿಚಿತ ತಂಡದಿಂದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ!

ಮಂಗಳೂರು: ಅಪರಿಚಿತ ತಂಡವೊಂದು ನಗರದ ನೀರುಮಾರ್ಗ ಪಡು ಎಂಬಲ್ಲಿ ವ್ಯಕ್ತಿಯೋರ್ವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಇಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಅಡ್ಯಾರ್ ಪದವು ನಿವಾಸಿ ರಿಯಾಝ್ ಅಹ್ಮದ್(38) ಎಂಬವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ.


ಆಟೋ ರಿಕ್ಷಾ ಚಾಲಕರಾಗಿ ಹಾಗೂ ಜಾಗದ ವ್ಯವಹಾರ ನಡೆಸುತ್ತಿದ್ದ ರಿಯಾಝ್ ಅಹ್ಮದ್ ಅವರು ಇಂದು ನಗರದ ಹೊರವಲಯದಲ್ಲಿರುವ ನೀರುಮಾರ್ಗದ ಪಡು  ಎಂಬಲ್ಲಿ ಕಾರಿನಲ್ಲಿ ಕುಳಿತಿದ್ದರು‌. ಈ ಸಂದರ್ಭ ಅಲ್ಲಿಗೆ 5-6 ಮಂದಿಯಿದ್ದ ತಂಡವೊಂದು ಏಕಾಏಕಿ ರಿಯಾಝ್ ಅಹ್ಮದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಸಂದರ್ಭ ಅವರ ತಲೆಗೆ ಗಾಯವಾಗಿತ್ತು. ತಕ್ಷಣ ಅವರನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಅವರು ಕುಳಿತಿದ್ದ. ರಿಟ್ಝ್ ಕಾರು ಕೂಡಾ ಜಖಂಗೊಂಡಿದೆ ಎನ್ನಲಾಗಿದೆ. ಈ ದಾಳಿ ಯಾರು ನಡೆಸಿದ್ದಾರೆ. ಯಾಕಾಗಿ ನಡೆಸಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ‌.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.