ಅತ್ತೆಗೆ ಅನ್ನದಲ್ಲಿ ನಿದ್ದೆ ಮಾತ್ರೆ, ಜಿರಳೆ ಔಷಧಿ ಹಾಕಿ ಕೊಲ್ಲಲೆತ್ನಿಸಿದ ಖತರ್ನಾಕ್ ಸೊಸೆ: ಪತಿಯಿಂದಲೇ ದೂರು ದಾಖಲು

ಬೆಂಗಳೂರು: ತನ್ನ ತಾಯಿಯನ್ನೇ ಕೊಲ್ಲಲು ಸಂಚು ಹೂಡಿದ್ದಾಳೆಂದು ಆರೋಪಿಸಿ ಪತಿಯೋರ್ವನು ಪತ್ನಿಯ ವಿರುದ್ಧವೇ ದೂರು ನೀಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಯಿಶಾ‌ ಎಂಬಾಕೆ ತನ್ನ ಅತ್ತೆಯ ಊಟದಲ್ಲಿ ನಿದ್ರೆ ಮಾತ್ರೆ ಹಾಗೂ ಜಿರಳೆ ಔಷಧಿ ಹಾಕಿ ಕೊಲ್ಲಲು ಸಂಚು ರೂಪಿಸಿದ್ದಾಳೆಂದು ಆರೋಪಿಸಿ ಆಕೆಯ ಪತಿ ಆಸಿಫ್ ಖಾನ್ ದೂರು ನೀಡಿದ್ದಾರೆ. ಆಯಿಶಾ ಈ ಬಗ್ಗೆ ತನ್ನ ತಾಯಿಯೊಂದಿಗೆ ಮಾತಾಡಿರುವ ಆಡಿಯೋದಲ್ಲಿ ಕೊಲೆಯ ಸಂಚು ಬಯಲಾಗಿದೆ. ನಿದ್ರೆ ಮಾತ್ರೆ ಹಾಗೂ ಜಿರಳೆ ಔಷಧ ಮುಗಿದಿದೆ. ಮೆಡಿಕಲ್​ನಿಂದ ಇನ್ನೂ ಉತ್ತಮವಾಗಿರುವ ಮಾತ್ರೆ ಹಾಗೂ ಔಷಧಿ ತಂದುಕೊಡು ಊಟದಲ್ಲಿ ಹಾಕಿ ಕೊಡ್ತಿನಿ ಎಂದಿರುವ ವಿಚಾರ ಪತಿಗೆ ಕೇಳಿದೆ.

ಮಾತ್ರೆ ಹಾಕಿದ್ದ ಊಟವನ್ನು ಸೇವಿಸಿರುವ ಆಸಿಫ್​ ಕುಟುಂಬ ಅಸ್ವಸ್ಥ‌ವಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಸದ್ಯ ಅಯಿಶಾ, ಹುಸೇನ್ ಸಾಬ್, ಕಮರ್ ತಾಜ್, ಹರಾರತ್ ವಿರುಧ್ಧ ಭಾರತೀಯ ದಂಡ ಸಂಹಿತೆ 307, 323, 504, 506 ಸೆಕ್ಷನ್ ಅಡಿಯಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.