ಚೀನಾ ದೇಶದ 135 ವರ್ಷದ ಹಿರಿಯಜ್ಜಿ ಇನ್ನಿಲ್ಲ!

ಬೀಜಿಂಗ್: ಚೀನಾ ದೇಶದ ಅತ್ಯಂತ ಹಿರಿಯ ನಾಗರಿಕಳು ಎಂದು ದಾಖಲೆಗೆ ಪಾತ್ರವಾಗಿದ್ದ 135 ವರ್ಷದ ಮಹಿಳೆ ಅಲಿಮಿಹಾನ್ ಸೆಯಿಟಿ ಶನಿವಾರ ಮೃತಪಟ್ಟಿದ್ದಾರೆ. 

ಉಯಿಘರ್ ಸ್ವಾಯತ್ತ ಪ್ರಾಂತದಲ್ಲಿರುವ ಕ್ಸಿನ್‌ಜಿಯಾಂಗ್‌ನಲ್ಲಿರುವ  ಸ್ವಗೃಹದಲ್ಲಿಯೇ ಈ ಹಿರಿಯಜ್ಜಿ ಇಹಲೋಕ ತ್ಯಜಿಸಿದ್ದಾರೆಂದು ಸ್ಥಳೀಯ ಆಡಳಿತವು ತಿಳಿಸಿದೆ. ಕಾಶಗರ್ ಪ್ರಸ್ಥಭೂಮಿಯ ಶುಲೆ ರಾಜ್ಯದಲ್ಲಿ ಅಲಿಮಿಹಾನ್ ಸೆಯಿಟಿಯವರು 1886ರ ಜೂನ್ 25ರಂದು ಜನಿಸಿದ್ದರು. 2013ರಲ್ಲಿ ಚೀನಾದ ವೃದ್ಧಾಪ್ಯ ಶಾಸ್ತ್ರ ಹಾಗೂ ವೃದ್ಧಾಪ್ಯ ರೋಗ ಚಿಕಿತ್ಸಾ ಶಾಸ್ತ್ರ ಸಂಘಟನೆಯು ಬಿಡುಗಡೆಗೊಳಿಸಿದ ದಾಖಲೆಗಳ ಪ್ರಕಾರ ಈಕೆ ಚೀನಾದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಗಳ ಪಟ್ಟಿಯಲ್ಲಿ ಅಲಿಮಿಹಾನ್ ಪ್ರಥಮ ಸ್ಥಾನ ಪಡೆದಿದ್ದರು. 

ಅಲಿಮಿನಾಹ್ ಸಯಿಟಿ ತಮ್ಮ ಕಡೆಗಾಲದವರೆಗೂ ಅತ್ಯಂತ ಸರಳ ಜೀವನ ನಡೆಸಿದ್ದರು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತಿದ್ದ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಸೂರ್ಯನ ಬಿಸಿಲಿಗೆ ಮೈಯೊಡ್ಡುತ್ತಿದ್ದರಂತೆ. ಅಲ್ಲದೆ ಅಲಿಮಿನಾಹ್ ವಾಸವಾಗಿದ್ದ ಕೊಮುಕ್ಸೆರಿಕ್ ಪಟ್ಟಣವು ‘ದೀರ್ಘಾಯುಷಿಗಳ ಪಟ್ಟಣ’ವೆಂದೇ ಹೆಸರುವಾಸಿಯಾಗಿತ್ತು. ಆರೋಗ್ಯ ಸೇವೆಗಳ ಸುಧಾರಣೆಯು ಕೂಡಾ ಈ ನಗರದ ನಿವಾಸಿಗಳ ದೀರ್ಘಾಯುಷ್ಯಕ್ಕೆ ಭಾಗಶಃ ಕೊಡುಗೆ ನೀಡಿದೆಯೆಂದು ವರದಿಯೊಂದು‌ ತಿಳಿಸಿದೆ.