ಪುನೀತ್ ರಾಜ್‍ಕುಮಾರ್ ವಿಚಾರದಲ್ಲಿ ಕಾಲಿವುಡ್ ನಟಿ‌ ಲಕ್ಷ್ಮೀ ಮಂಚುವನ್ನು ತರಾಟೆಗೆ‌ ತೆಗೆದುಕೊಂಡ ನೆಟ್ಟಿಗರು : ಆದ್ದಾದರೂ ಏನು?

ಹೈದರಾಬಾದ್​: ನಟ ಪುನೀತ್​ ರಾಜ್​ಕುಮಾರ್​ ಅವರ ಹಠಾತ್ ಸಾವು ಇಡೀ ಭಾರತೀಯ ಚಿತ್ರರಂಗವನ್ನೇ ಆಘಾತಕ್ಕೆ ತಳ್ಳಿದೆ. ಈ ನಡುವೆ ಪುನೀತ್​ ರಾಜ್‌ಕುಮಾರ್ ಅವರು ನಿಧನರಾಗಿದ್ದಾರೆಂದು  ಅಧಿಕೃತವಾಗಿ ಘೋಷಣೆಯಾಗುವ ಮೊದಲೇ ಪುನೀತ್​ ಇನ್ನಿಲ್ಲ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಅ.29ರಂದು ಮಧ್ಯಾಹ್ನದ ಸುಮಾರಿಗೆ ನಟ ಪುನೀತ್​ ರಾಜ್‌ಕುಮಾರ್ ಮೃತಪಟ್ಟಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಆದರೆ, ಕಾಲಿವುಡ್​ ನಟಿ ಲಕ್ಷ್ಮಿ ಮಂಚು ವೈದ್ಯರು‌ ಅಧಿಕೃತ ಘೋಷಣೆ ಮಾಡುವ ಮುನ್ನವೇ ಪುನೀತ್​ ನಿಧನದ ಸುದ್ದಿ ಬಗ್ಗೆ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದರು. 


ಲಕ್ಷ್ಮೀ ಮಂಚು ಅವರು 'ಅಯ್ಯೋ ದೇವರೆ… ಇಲ್ಲ… ಇದು ಖಂಡಿತ ನಿಜವಾಗಬಾರದು! ಇದು ಹೇಗೆ ಸಾಧ್ಯ? ಪುನೀತ್​ ಕುಟುಂಬಕ್ಕೆ ನನ್ನ ಸಂತಾಪಗಳು. ಪುನೀತ್​ ಆತ್ಮಕ್ಕೆ ಶಾಂತಿ ದೊರಕಲಿ. ತುಂಬಾ ಬೇಗನೇ ಹೊರಟುಬಿಟ್ಟಿರಿ' ಎಂದು ಅ. 29ರಂದು ಮಧ್ಯಾಹ್ನ 1.22ಕ್ಕೆ ಟ್ವೀಟ್​ ಮಾಡಿದ್ದಾರೆ. ಆದರೆ, ಆಗಿನ್ನು ಅಧಿಕೃತವಾಗಿ ಅವರು ಮೃತಪಟ್ಟ ವಿಚಾರ ಇನ್ನೂ ಘೋಷಣೆ ಆಗಿರಲಿಲ್ಲ. 

ನಟಿ ಲಕ್ಷ್ಮೀ ಮಂಚು ಅವರ ಈ ಟ್ವೀಟ್​ ವೈರಲ್​ ಆಗುತ್ತಿದ್ದಂತೆ ತೀವ್ರ ಆಕ್ರೋಶಗಳು ವ್ಯಕ್ತವಾಗಿವೆ. ಇದು ಓರ್ವ ವ್ಯಕ್ತಿಯ ಬಗ್ಗೆ ನಿಮಗಿರುವ ಗೌರವವನ್ನು ತೋರಿಸುತ್ತದೆ. ಸುದ್ದಿ ಅಧಿಕೃತವಾಗದೆ ನೀವು ಸುದ್ದಿಯನ್ನು ಪ್ರಕಟಿಸುವ ಅಗತ್ಯವೇನಿತ್ತು?’ ಎಂದು ಆಕೆಯನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ವ್ಯಕ್ತಿಯೊಬ್ಬರ ಮರಣ ಹಾಗೂ ಅವರ ಕುಟುಂಬಕ್ಕೆ ಕೊಡುವ ಗೌರವ ಇದೇನಾ? ಎಂದು ಲಕ್ಷ್ಮೀ ಮಂಚು ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.‌ ಅದಲ್ಲದೆ, ಇನ್ನು ‌ಮುಂದೆ ಈ ರೀತಿ ಮಾಡಬೇಡಿ. ಮಾಹಿತಿ ಖಚಿವಾದ ಬಳಿಕವೇ ಪೋಸ್ಟ್​ ಅಥವಾ ಟ್ವೀಟ್​ ಮಾಡಿ ಎಂದು ಸಲಹೆ ನೀಡಿದ್ದಾರೆ.