ವಿವಾಹಿತನಿಗೆ ಫೇಸ್ ಬುಕ್ ನಲ್ಲಿ ಪರಿಚಯಗೊಂಡ ಯುವತಿಯೊಂದಿಗೆ 'ಲವ್': ಆಕೆಯ ರಂಪಾಟಕ್ಕೆ ನೇಣಿಗೆ ಶರಣಾದ ಪ್ರಿಯಕರ

ಬೆಂಗಳೂರು: ವಿವಾಹಿತನೋರ್ವ ಫೇಸ್‌ಬುಕ್‌ನಲ್ಲಿ ಪರಿಚಿತಳಾಗಿರುವ ಯುವತಿಯೋರ್ವಳ ಪ್ರೇಮಪಾಶಕ್ಕೆ ಸಿಲುಕಿ, ಕೊನೆಗೆ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚಿಕ್ಕಬಾಣಾವರದ ನಿವಾಸಿ‌‌ ಚೇತನ್‌( 27) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಯುವಕ.

ಚೇತನ್‌ಗೆ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಮದುವೆಯಾಗಿ ಮೂರು ವರ್ಷಕ್ಕೇ ಪತಿ-ಪತ್ನಿಯರಲ್ಲಿ ವಿರಸ ಮೂಡಿ ಬೇರೆಯಾಗಿದ್ದರು. ಚೇತನ್‌ ಪತ್ನಿಯನ್ನು ತೊರೆದು ಪ್ರತ್ಯೇಕವಾಗಿ ವಾಸವಾಗಿದ್ದ. ಆತನಿಗೆ ಮೂರು ವರ್ಷದ ಮಗು ಕೂಡ ಇದೆ. ದಂಪತಿಯ ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ.

ಈ ನಡುವೆ ಒಂಟಿಯಾಗಿದ್ದ ಚೇತನ್‌ ಫೇಸ್‌ಬುಕ್‌ನಲ್ಲಿ ಸದಾ ಆ್ಯಕ್ಟೀವ್‌ ಆಗಿದ್ದ. ಈ ಸಂದರ್ಭ ಯುವತಿಯೋರ್ವಳ ಪರಿಚಯವಾಗಿದೆ. ಬಳಿಕ ಪ್ರೇಮಕ್ಕೆ ತಿರುಗಿದೆ. ಆರಂಭದಲ್ಲಿ ಈತ ತನಗೆ ಮದುವೆಯಾಗಿರುವ ವಿಚಾರವನ್ನು ಯುವತಿಗೆ ತಿಳಿಸಿರಲಿಲ್ಲ.

ಆದರೆ ಯಾವಾಗ ಚೇತನ್ ಗೆ ಮದುವೆಯಾಗಿದೆ ಎಂಬ ವಿಚಾರ ತಿಳಿಯಿತೋ ಆಗ ಯುವತಿ ಗಲಾಟೆ ಮಾಡಲು ಆರಂಭಿಸಿದ್ದಾಳೆ. ತನಗೆ ಮೋಸ ಮಾಡಿರುವುದಾಗಿ ರಂಪಾಟ ಮಾಡಿದ್ದಾಳೆ. ಮೊದಲೇ ನೊಂದಿದ್ದ ಚೇತನ್‌ಗೆ ಇದು ಸಹಿಸಲಾಗದೆ ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.