
ಆಟ ಆಡಲೆಂದು ಹೋಗಿದ್ದ ಬಾಲಕನಿಗೆ ವಿದ್ಯುತ್ ತಂತಿಯೇ ಜವರಾಯನಾಗಿ ಕಾದಿದ್ದ: ಅವೈಜ್ಞಾನಿಕವಾಗಿ ಎಳೆದಿದ್ದ ತಂತಿಯಿಂದ ಅವಘಡ
11/02/2021 08:05:00 PM
ಬೆಂಗಳೂರು: ಮೊನ್ನೆಯಷ್ಟೇ ಆಡುತ್ತಿದ್ದ ಬಾಲಕನೋರ್ವನು ವಿದ್ಯುದಾಘಾತಕ್ಕೆ ಬಲಿಯಾಗಿದ್ದು, ಅದರ ಮರುದಿನವೇ ಮತ್ತೋರ್ವ ಬಾಲಕ ವಿದ್ಯುದಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದರಹಳ್ಳಿಯಲ್ಲಿ ನಡೆದಿದ್ದು, ಆತನ ಮೃತದೇಹ ನಿನ್ನೆ ಪತ್ತೆಯಾಗಿದೆ.
ಸಾದರಹಳ್ಳಿಯಲ್ಲಿ ಕಾರ್ಯಾಚರಿಸುತ್ತಿದ್ದ ಗ್ರಾನೈಟ್ ಕಟಿಂಗ್ ಕಂಪೆನಿಯು ಅವೈಜ್ಞಾನಿಕವಾಗಿ ಎಳೆದುಕೊಂಡಿದ್ದ ವಿದ್ಯುತ್ ತಂತಿಯೇ ಬಾಲಕ ಜೀವವನ್ನು ಬಲಿಪಡೆದುಕೊಂಡಿದೆ. ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರ ಪುತ್ರ ಮೃತಪಟ್ಟ ಬಾಲಕ.
ಮೊನ್ನೆ ಆಟ ಆಡಲೆಂದು ಹೋಗಿದ್ದ ಈ ಏಳು ವರ್ಷದ ಬಾಲಕ ಗ್ರಾನೈಟ್ ಕಟಿಂಗ್ ಮಿಷನ್ಗೆ ಬಳಸಿದ್ದ ಹೈ ಪವರ್ ತಂತಿಯ ಸ್ಪರ್ಶಕ್ಕೆ ಒಳಗಾಗಿದ್ದಾನೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಆದರೆ ಈ ಪ್ರಕರಣ ನಿನ್ನೆ ಬೆಳಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಚಿಕ್ಕ ಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದರ ಮುಂಚಿನ ದಿನವೂ ಇದೇ ಬೆಂಗಳೂರಿನ ವಿದ್ಯಾರಣ್ಯ ಪುರದಲ್ಲಿ ಓರ್ವ ಬಾಲಕ ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದ. ಆಟವಾಡಲೆಂದು ಹೋಗಿದ್ದ 12ವರ್ಷದ ಮಣಿ ಎಂಬ ಬಾಲಕ ವಿದ್ಯುತ್ ಅವಘಡಕ್ಕೆ ಬಲಿಯಾದವನು.
ಈತ ಟ್ರಾನ್ಸ್ ಫಾರ್ಮರ್ ಬಳಿಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತಿಳಿಯದೆ ಸ್ಪರ್ಶಿಸಿದ್ದ. ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.