ತುಂಬು ಗರ್ಭಿಣಿಗಾಗಿ ಹೊರಟ ರೈಲು ಹಿಂದೆ ಬಂತು: ರೈಲು ಹೊರಡುವ ಸಮಯ ವಿಳಂಬವಾದರೂ ಅಧಿಕಾರಿಗಳ ನಡೆಗೆ ಮೆಚ್ಚುಗೆ

ಟಾಟಾನಗರ(ಜಾರ್ಖಂಡ್): ತುಂಬು ಗರ್ಭಿಣಿಯ ಹೆರಿಗೆಗಾಗಿ ಹೊರಟ ರೈಲು ಕೆಲವೇ ಕ್ಷಣಗಳಲ್ಲಿ ಮತ್ತೆ ಹಿಂದೆ ಬಂದ ಘಟನೆ ಜಾರ್ಖಂಡ್‌ನ ಟಾಟಾನಗರದಲ್ಲಿ ನಡೆದಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

ರಾಣು ದಾಸ್ ಎಂಬ ಮಹಿಳೆ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಗೆ ಇನ್ನೂ ಅವಧಿ ಇತ್ತು. ಆದ್ದರಿಂದ ಆಕೆ ಒಡಿಶಾಗೆ ಹೋಗಲೆಂದು ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ ರೈಲನ್ನು ಏರಿದ್ದಳು. ಆದರೆ ರೈಲು ನಿಲ್ದಾಣದಿಂದ ಹೊರಟು ಸ್ವಲ್ಪ ದೂರ ಹೋಗುವಷ್ಟರಲ್ಲೇ ರಾಣುದಾಸ್ ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. 

ನಸುಕಿನ ವೇಳೆ 4.10ಕ್ಕೆ ರೈಲು ಜೆಮ್‌ಶೆಡ್‌ಪುರ ಬಳಿಯ ಟಾಟಾನಗರದಿಂದ ಹೊರಟಿತ್ತು. ಸುಮಾರು 2.50 ಕಿ.ಮೀ.ನಷ್ಟು ರೈಲು ಹೋಗಿದೆ. ಆಗಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯ ಕುಟುಂಬಸ್ಥರು ರೈಲಿನ ತುರ್ತು ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ಬಳಿಕ ಅಲ್ಲಿಯೇ ಏನೋ ಒಂದು ವ್ಯವಸ್ಥೆ ಮಾಡಿ ರೈಲಿನಲ್ಲಿಯೇ ಆಕೆಗೆ ಹೆರಿಗೆ ಮಾಡಿಸಲಾಗಿದೆ.

ಆದರೆ ರೈಲು ನಿಂತಿರುವುದನ್ನು ತಿಳಿದು ಆರ್‌ಪಿಎಫ್ ಸಿಬ್ಬಂದಿ, ಟಾಟಾನಗರ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಆದರೆ ರೈಲು ಮುಂದಿನ ನಿಲ್ದಾಣ ತಲುಪಲು ಕನಿಷ್ಠ 2.30 ಗಂಟೆಯಾದರೂ ಬೇಕಾಗಿತ್ತು. ಆದ್ದರಿಂದ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಬಹುದು ಎಂದು ಅರಿತ ಅಧಿಕಾರಿಗಳು ರೈಲನ್ನು ಟಾಟಾನಗರ ನಿಲ್ದಾಣಕ್ಕೆ ಮತ್ತೆ ವಾಪಸ್‌ ಕರೆಸಿದ್ದಾರೆ. 

ಬಳಿಕ ಆಗ ತಾನೆ ಹೆರಿಗೆಯಾಗಿ ಬಸವಳಿದಿದ್ದ ತಾಯಿ ಹಸುಗೂಸವನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ತಾಯಿ, ಮಗುವಿಗೆ ಯಾವುದೇ ತೊಂದರೆಯಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ರೈಲು ಹೊರಡುವುದು ಬಹಳಷ್ಟು ವಿಳಂಬವಾಗಿದೆ. ಆದರೆ ಆ ಕ್ಷಣದಲ್ಲಿ ಪ್ರಯಾಣಿಕರಿಗೆ ಏನು ಆಗಿದೆ, ಯಾಕಾಗಿ ರೈಲು ನಿಂತಿದೆ, ಮತ್ತೆ ತಿರುಗಿ ಬಂದಿದೆ ತಿಳಿದಿರಲಿಲ್ಲ. ಆ ಬಳಿಕ ವಿಚಾರ ತಿಳಿದು ಹಲವರು ಅಧಿಕಾರಿಗಳ ಕ್ರಮಕ್ಕೆ ಶ್ಲಾಘನೆ ವ್ಯಕ್ತ‍‍ಪಡಿಸಿದ್ದಾರೆ.