ಕಾಲೇಜು‌ ಆವರಣದಲ್ಲಿಯೇ ಬರ್ಬರವಾಗಿ ಹತ್ಯೆಯಾದ ವಿದ್ಯಾರ್ಥಿನಿ: ಇದ್ದೊಬ್ಬ ಮಗಳನ್ನು ಕಳೆದುಕೊಂಡ ಅನಾಥೆಯಾದಳು ಅನಾರೋಗ್ಯ ಪೀಡಿತ ಹೆತ್ತವ್ವೆ

ಕೊಟ್ಟಾಯಂ (ಕೇರಳ): ತನ್ನನ್ನು ಪ್ರೀತಿ ಮಾಡದಿರುವ ಕೋಪದಿಂದ ಸಹಪಾಠಿ ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಲ್ಲಿಯೇ ರುಂಡ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅ.1ರಂದು ಕೊಟ್ಟಾಯಂನ ಸೈಂಟ್ ಥಾಮಸ್ ಕಾಲೇಜು ಕ್ಯಾಂಪಸ್​ನಲ್ಲಿ ನಡೆದಿದೆ.  

ವೈಕಂನ ತಲಯೋಲಪರಂಬು ಮೂಲದ ನಿಥಿನಾ ಮೋಳ್(22) ಹತ್ಯೆಯಾದ ವಿದ್ಯಾರ್ಥಿನಿ. ಕೂತಟ್ಟುಕುಳಂ ನಿವಾಸಿ ಅಭಿಷೇಕ್ ಬೈಜು ಹತ್ಯೆ ಆರೋಪಿ.  

ಅಭಿಷೇಕ್ ಬೈಜು ತನ್ನನ್ನು ಪ್ರೀತಿಸುವಂತೆ ನಿಥಿನಾ ಮೋಳ್ ನನ್ನು ಪದೇ ಪದೇ ಪೀಡಿಸುತ್ತಿದ್ದ. ಆದರೆ ನಿಥಿನಾ ಮೋಳ್ ಪ್ರೀತಿಗೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡಿದ್ದ ಪಾಗಲ್ ಪ್ರೇಮಿ ಅಭಿಷೇಕ್ ಬೈಜು ಅ.1 ರಂದು ಪರೀಕ್ಷೆ ಬರೆಯಲೆಂದು ಬಂದಿದ್ದ ನಿಥಿನಾ ಮೋಳ್ ತಲೆಯನ್ನು ಕಾಲೇಜು‌ ಆವರಣದೊಳಗೇ ಕಡಿದು ಹತ್ಯೆ ಮಾಡಿದ್ದಾನೆ. ಪೊಲೀಸರು ಅಭಿಷೇಕ್ ಬೈಜುವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.  

ಇದೀಗ ಅನಾರೋಗ್ಯ ಪೀಡಿತ ತಾಯಿಯ ಬದುಕಿಗೆ ಭರವಸೆಯಾಗಿದ್ದ ಒಬ್ಬಳೇ ಮಗಳು ನಿಥಿನಾ ಮೋಳ್ ಶವವಾಗಿದ್ದಾಳೆ. ತಾಯಿಯ ಆಕ್ರಂದನ ಎಂಥವರ ಕರುಳನ್ನು ಕಿವುಚುವಂತಿತ್ತು. ಓದುವುದರಲ್ಲಿಯೂ ಸ್ಮಾರ್ಟ್​ ಆಗಿದ್ದ ನಿಥಿನಾ ಮೋಳ್ ಪತಿಯಿಂದ ದೂರವಾಗಿ ಬದುಕುತ್ತಿದ್ದ ತಾಯಿ ಬಿಂದುವಿಗೆ ನಿಥಿನಾ ಭರವಸೆಯ ಬೆಳಕಾಗಿದ್ದಳು.  ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಿಂದು ವೈಕಂನ ತಲಯೋಲಪರಂಬು ಮೂಲದವರು. ಪತಿಯಿಂದ ದೂರವಾಗಿ ಓರ್ವಳೇ ಮಗಳೊಂದಿಗೆ ವಾಸವಿದ್ದು ಜೀವನ ನಿರ್ವಹಣೆ ಮಾಡಲು ಹರಸಾಹಸ ಪಡುತ್ತಿದ್ದರು. ಇದರ ನಡುವೆ ಬಿಂದುವಿಗೆ ಸದಾ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು.   

ಕಾಲೇಜು ಓದಿನ ನಡುವೆ ಪಾರ್ಟ್ ಟೈಂ ಉದ್ಯೋಗ ಮಾಡಿ ನಿಥಿನಾ ಬೆನ್ನೆಲುಬಾಗಿ ತಾಯಿಗೆ ನಿಲ್ಲುತ್ತಿದ್ದಳು. ತಮ್ಮ ಮಗಳು ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬಿಂದು ಸದಾ ಬಯಸುತ್ತಿದ್ದರು. ಪ್ರವಾಹ ಬಂದ ಸಂದರ್ಭ ಇದ್ದೊಂದು ಮನೆ ಕಳೆದೊಂಡ ತಾಯಿ-ಮಗಳು ಜಾಯ್​ ಅಲುಕ್ಕಾಸ್​ ಉದ್ಯಮಿ ನೆರವಿನಲ್ಲಿ ವ್ಯವಸ್ಥೆಯಾದ ಮನೆಯಲ್ಲಿ ವಾಸವಿದ್ದರು.   

ಶುಕ್ರವಾರ ಅ.1ರಂದು ತಾಯಿಯೊಂದಿಗೆ ಮನೆ ಬಿಟ್ಟ ನಿಥಿನಾ ಕಾಲೇಜಿಗೆ ತೆರಳಿದ್ದರೆ, ತಾಯಿ ಕೊಟ್ಟಾಯಂಗೆ ತೆರಳುತ್ತಾರೆ. ಇದಾದ ಕೆಲವೇ ಗಂಟೆಗಳಲ್ಲಿ ಆಘಾತದ ಕರೆಯೊಂದು ಬಿಂದುವಿಗೆ ಬರುತ್ತದೆ. ಭಯಾನಕ ಸುದ್ದಿ ಕೇಳಿ ಕೊಟ್ಟಾಯಂ ಆಸ್ಪತ್ರೆಗೆ ಧಾವಿಸುವ ಹೊತ್ತಿಗಾಗಲೇ ನಿಥಿನಾ ಬರ್ಬರವಾಗಿ ಹತ್ಯೆಯಾಗಿ ಶವವಾಗಿ ಮಲಗಿದ್ದಳು.  

 ನಿಥಿನಾ ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜಿ​ನಲ್ಲಿ ಮೂರನೇ ವರ್ಷದ ‘ಬ್ಯಾಚುಲರ್‌ ಆಫ್‌ ವೋಕೇಷನ್‌’ ವ್ಯಾಸಂಗ ಮಾಡುತ್ತಿದ್ದಳು. ಅಭಿಷೇಕ್ ಬೈಜು ಹಾಗೂ ನಿಥಿನಾ ಮೋಳ್ ನಡುವೆ ಪ್ರೀತಿ ಇತ್ತು ಎನ್ನಲಾಗಿದೆ. ಆದರೆ ಲವ್​ ಬ್ರೇಕ್​ ಅಪ್​ ಮಾಡಿಕೊಂಡಿರುವ ಕೋಪದಲ್ಲಿ ಅಭಿಷೇಕ್​ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ದೃಢಗೊಂಡಿದೆ.