-->
ಕೋಳಿ ಊಟ ಸೇವಿಸಿ ಓರ್ವ ಮೃತ್ಯು: ಐವರ ಆರೋಗ್ಯದಲ್ಲಿ ಏರುಪೇರು

ಕೋಳಿ ಊಟ ಸೇವಿಸಿ ಓರ್ವ ಮೃತ್ಯು: ಐವರ ಆರೋಗ್ಯದಲ್ಲಿ ಏರುಪೇರು

ಕಡಬ: ಕೋಳಿ‌ ಊಟ ಸೇವಿಸಿ ಓರ್ವ ಮೃತಪಟ್ಟು, ಐವರ ಆರೋಗ್ಯ ಹದಗೆಟ್ಟ ಘಟನೆ ಕಡಬದ ಬಲ್ಯ ಸಮೀಪದ ಗಾಣದಕೊಟ್ಟಿಗೆ ಎಂಬಲ್ಲಿ ನಡೆದಿದೆ.

ಬಲ್ಯ ಗ್ರಾಮದ ಗಾಣದ ಕೊಟ್ಟಿಗೆ ನಿವಾಸಿ ದೇವಪ್ಪ ಗೌಡ(60) ಮೃತಪಟ್ಟ ದುರ್ದೈವಿ.

ಸೆ.26ರಂದು ದೇವಪ್ಪ ಗೌಡರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸಂಘದ ಅಡಿಯಲ್ಲಿ ಕೂಲಿ ಕೆಲಸ ಮಾಡಲು ಸಂಘದ ಗುಂಪಿನವರೊಂದಿಗೆ ಸೇರಿಕೊಂಡು ನೆರೆಮನೆಯ ಸಂಜೀವ ದೇವಾಡಿಗರವರ ಮನೆಗೆ ಬಂದಿದ್ದರು. ಅಲ್ಲಿ ಮಧ್ಯಾಹ್ನದ ಊಟಕ್ಕೆ ಕೋಳಿ ಊಟ ಸೇವಿಸಿದ್ದರು. ಈ‌ ಸಂದರ್ಭ ಕೆಲಸಕ್ಕೆ ಬಂದಿದ್ದ ಆನಂದಗೌಡ, ಮನೆ ಮಾಲಕ ಸಂಜೀವ ದೇವಾಡಿಗ ಮತ್ತು ಮನೆ ಮಂದಿ 3 ಮಂದಿ ಆಹಾರವನ್ನು ಸೇವಿಸಿದ್ದರು. 

ಸಂಜೆಯವರೆಗೆ ಸಂಜೀವ ದೇವಾಡಿಗರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಸಂಜೆ ಮನೆಗೆ ಬಂದಿದ್ದ ದೇವಪ್ಪ ಗೌಡರಿಗೆ ವಾಂತಿ ಹಾಗೂ ಹೊಟ್ಟೆ ನೋವು ಉಂಟಾಗಿದೆ. ಆದ್ದರಿಂದ ಅವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಲ್ಲದೆ ಸಂಜೀವ ದೇವಾಡಿಗರ ಮನೆಯಲ್ಲಿ ಊಟ ಮಾಡಿರುವ ಆನಂದ ಗೌಡ, ಸಂಜೀವ ದೇವಾಡಿಗರ ಪತ್ನಿ ಗೀತಾ ಮತ್ತು ಮಕ್ಕಳಾದ ಶ್ರೇಯಾ, ಶ್ರವಣ್‌ರವರಿಗೂ ಸಹ ವಾಂತಿ ಹಾಗೂ ಹೊಟ್ಟೆ ನೋವು ಉಂಟಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಈ ನಡುವೆ ದೇವಪ್ಪ ಗೌಡರ ಆರೋಗ್ಯದಲ್ಲಿ ಮತ್ತೂ ಚಿಂತಾಜನಕ ಸ್ಥಿತಿ ಉಂಟಾಗಿರುವ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಸೆ.30ರಂದು ಮಂಗಳೂರಿನ ಯೆನಪೊಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಅ.1 ರಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article