ಉಪ್ಪಿನಂಗಡಿ: ದ.ಕ.ಜಿಲ್ಲೆಯ ಉಪ್ಪಿನಂಗಡಿಯ ಉದನೆಯ ಪರಶುರಾಮ ಮೈದಾನ ಎಂಬಲ್ಲಿ ಸಾರ್ವಜನಿಕ ಗಣೇಶೋತ್ಸವದ ಗಣೇಶನ ವಿಗ್ರಹ ಇಡುವ ಗಣೇಶನ ಕಟ್ಟೆಯ ಮೆಟ್ಟಿಲು ಹಾಗೂ ಆವರಣ ಗೋಡೆಯನ್ನು ಕಲ್ಲಿನಿಂದ ಗುದ್ದಿ ಹಾನಿಗೊಳಿಸಿರುವ ಆರೋಪದ ಮೇಲೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಗೋಪಾಲ್ ಪುರ್ ತಾಲೂಕಿನ ಗರ್ನಿಯಾ ಸುದಾಮ್ ನಿವಾಸಿ ರವೀಂದ್ರ್ ಕುಮಾರ್ (25) ಬಂಧಿತ ಆರೋಪಿ.
ಉದನೆಯಲ್ಲಿ ಗಣೇಶೋತ್ಸವ ನಡೆದ ಬಳಿಕ ರಾತ್ರಿ ವೇಳೆ ಗಣೇಶನ ಕಟ್ಟೆಗೆ ಆಕ್ರಮ ಪ್ರವೇಶ ಮಾಡಿದ ದುಷ್ಕರ್ಮಿಗಳು ಗಣೇಶನ ಕಟ್ಟೆಯನ್ನು ಮತ್ತು ಆವರಣ ಗೋಡೆಯನ್ನು ಹಾನಿಗೊಳಿಸಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಗೊಂದಲವೂ ಸೃಷ್ಟಿಯಾಗಿತ್ತು. ಆದರೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಉಪ್ಪಿನಂಗಡಿ ಪೊಲೀಸರು, ಸ್ಥಳದಲ್ಲಿಯೇ ದೊರಕಿರುವ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ರವೀಂದ್ರ ಕುಮಾರ್ ಬಂಧಿಸಿದ್ದಾರೆ.
ಘಟನಾ ಸ್ಥಳದಲ್ಲಿ 50 ರೂ. ನೋಟಿನ ಹರಿದ ಚೂರು ಪತ್ತೆಯಾಗಿತ್ತು. ಆರೋಪಿಯನ್ನು ಪತ್ತೆ ಹಚ್ಚಿದ ಬಳಿಕ ಪರಿಶೀಲನೆ ನಡೆಸಿದಾಗ ಆತನ ಬರ್ಮುಡದಲ್ಲಿಯೂ ಈ ನೋಟಿನ ಉಳಿದ ಚೂರು ಪತ್ತೆಯಾಗಿತ್ತು. ಅಲ್ಲದೆ ಈ ಘಟನೆಗೂ ಮೊದಲು ಆರೋಪಿ ಉದನೆ ಪೇಟೆಯಲ್ಲಿ ಅಟೋರಿಕ್ಷಾ ಚಾಲಕನೊಬ್ಬನಿಗೆ ಹಾಗೂ ಇತರ ವಾಹನಗಳಿಗೆ ಕಲ್ಲು ಎಸೆದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯನ್ನು ಕಲೆ ಹಾಕಿ ರಿಕ್ಷಾ ಚಾಲಕರೋರ್ವರ ಹೇಳಿಕೆಯ ಆಧಾರದಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗಿತ್ತು.
ಆರೋಪಿಯ ವಿರುದ್ಧ ಅ.ಕ್ರ 87/2021 ಕಲಂ: 447,427 ಪ್ರಕಾರ ಪ್ರಕರಣ ದಾಖಲಾಗಿದೆ. ಆರೋಪಿ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ಬಂಧನ ವಿಧಿಸಲಾಗಿದೆ.