ಅಪ್ರಾಪ್ತೆಯ ಅಪಹರಣ, ಅತ್ಯಾಚಾರ ಆರೋಪ ಸಾಬೀತು: ಆರೋಪಿಗೆ 7 ವರ್ಷ ಕಠಿಣ ಶಿಕ್ಷೆ, ದಂಡ

ಮಂಗಳೂರು: ಅಪ್ರಾಪ್ತೆಯನ್ನು ಅತ್ಯಾಚಾರ ನಡೆಸಿರುವ ಆರೋಪ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎಫ್‌ಟಿಎಸ್‌ಸಿ-1(ಪೊಕ್ಸೊ) ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ‌ ಅಪರಾಧಿ ವಿಟ್ಲ ಕಸ್ಬಾ ಉಕ್ಕುಡದ ಬಾಲಕೃಷ್ಣ (25) ಎಂಬಾತನಿಗೆ 7 ವರ್ಷ ಕಠಿಣ ಶಿಕ್ಷೆ ಹಾಗೂ 75 ಸಾವಿರ ರೂ. ದಂಡ‌ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಅಪಹರಣ ಪ್ರಕರಣಕ್ಕೆ 5 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 50 ಸಾವಿರ ರೂ.ವನ್ನು ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ ನೀಡಬೇಕು. ಅಲ್ಲದೆ ಅಪರಾಧಿ ಬಾಲಕೃಷ್ಣ ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 4 ತಿಂಗಳ ಕಠಿಣ ಶಿಕ್ಷೆ ಅನುಭವಿಸಬೇಕು.‌ ಜತೆಗೆ ಸಂತ್ರಸ್ತ ಬಾಲಕಿಗೆ ಸರಕಾರವು 2 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಆದೇಶಿಸಿದ್ದಾರೆ.

ಅಪರಾಧಿ ಬಾಲಕೃಷ್ಣನು ತನ್ನದೇ ಊರಿನ ಪರಿಚಿತ ಬಾಲಕಿಯನ್ನು ಶಾಲೆಗೆ ಹೋಗುವ ಸಂದರ್ಭ ಪರಶುರಾಮ ಎಂಬಾತನ ಸಹಕಾರದಿಂದ 2019ರ ಜು.25ರಂದು ಅಪಹರಿಸಿದ್ದನು.‌ ಬಾಲಕಿಯನ್ನು ಬಿ.ಸಿ.ರೋಡ್‌ವರೆಗೆ ಬೈಕ್‌ನಲ್ಲಿ ಕರೆದೊಯ್ದಿದ್ದ. ಬಳಿಕ ಬಸ್‌ ಮೂಲಕ ಬಾಲಕಿಯನ್ನು ಮೂಡುಬಿದಿರೆಯ ನೆಲ್ಲಿಕಾರು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯನ್ನು ಪುಸಲಾಯಿಸಿ ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿತ್ತು. 

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೊ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದಾರೆ.