ಮಂಗಳೂರು: ಬೀದಿ ನಾಯಿ ಮೇಲೆ ಅಮಾನುಷವಾಗಿ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದ್ದು, ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.
ನಗರದ ಶಿವಭಾಗ್ ಆಭರಣ ಜುವೆಲ್ಲರಿ ಬಳಿಯಲ್ಲಿ ನಾಯಿಯ ಶವ ಕಂಡು ಬಂದಿತ್ತು. ಇದನ್ನು ಯಾರೋ ಸ್ಥಳೀಯರು ಗಮನಿಸಿ ಅನಿಮಲ್ ಕೇರ್ ಟ್ರಸ್ಟ್ ಗೆ ಮಾಹಿತಿ ನೀಡಿದ್ದಾರೆ. ಗುಂಡು ಹೊಡೆದು ಸಾಯಿಸಿದ ರೀತಿ ಕಂಡುಬಂದ ಕಾರಣ, ಪ್ರಾಣಿ ದಯಾ ಸಂಘದ ಸುಮಾ ನಾಯಕ್ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.
ಶ್ವಾನದ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ದೇಹದ ಒಳಹೊಕ್ಕಿದ್ದ ಗುಂಡನ್ನು ಹೊರತೆಗೆಯಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಹರಿರಾಮ್ ಶಂಕರ್, ಏರ್ ಗನ್ ಬಳಸಿ ನಾಯಿಯನ್ನು ಕೊಂದಿರುವ ರೀತಿ ಕಂಡುಬಂದಿದೆ. ಬುಲೆಟ್ ಪೀಸ್ ದೇಹದಲ್ಲಿ ಒಳಗಿದ್ದುದನ್ನು ತೆಗೆದು ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆದಿದೆ. ಈ ಪ್ರದೇಶದಲ್ಲಿ ಸಿಸಿಟಿವಿ ಇರುವ ಬಗ್ಗೆ ಪರಿಶೀಲನೆ ನಡೆಸಿ ಗಂಭೀರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಜಾಗದಲ್ಲಿ ಶ್ವಾನವನ್ನು ಅಮಾನುಷವಾಗಿ ಏರ್‌ಗನ್‌ನಿಂದ ಶೂಟ್ ಮಾಡಿರುವುದು ಮಂಗಳೂರಿನಲ್ಲಿ ಹೊಸ ಬೆಳವಣಿಗೆ. ಇತ್ತೀಚೆಗೆ ನಾಯಿಯನ್ನು ಬೈಕಿಗೆ ಕಟ್ಟಿ ಎಳೆದುಕೊಂಡು ಹೋಗಿರುವುದು, ಆನಂತರ ಮತ್ತೊಂದು ಪ್ರಕರಣದಲ್ಲಿ ಸತ್ತ ನಾಯಿಯನ್ನು ಎಳ್ಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣಗಳಲ್ಲಿ ಉತ್ತರ ಕರ್ನಾಟಕ ಮೂಲದ ನಾಲ್ವರನ್ನು ಬಂಧಿಸಲಾಗಿತ್ತು.
ಇದೀಗ ಶ್ವಾನದ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು, ಈ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.

