Complaint against doctors- ವೈದ್ಯರಿಂದಲೇ ಕೋವಿಡ್ ನಿಯಮ ಉಲ್ಲಂಘನೆ: ದೂರು ನೀಡಿದರೂ FIR ದಾಖಲಿಸದ ಮಂಗಳೂರು ಪೊಲೀಸರು



ಮಂಗಳೂರಿನಲ್ಲಿ ವೈದ್ಯರೇ ಕೋವಿಡ್ ನಿಯಮ ಉಲ್ಲಂಘಿಸಿ ಸಮಾಜಕ್ಕೆ ಅಪಾಯಕಾರಿ ಸಂದೇಶ ಸಾರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮಂಗಳೂರು ಘಟಕ ಜುಲೈ 29ರಂದು ಆಯೋಜಿಸಿದ ವೈದ್ಯರ ದಿನಾಚರಣೆಯಲ್ಲಿ ಈ ಘಟನೆ ನಡೆದಿದೆ. ಐಎಂಎ ಮಂಗಳೂರು ಘಟಕದ ಪದಾಧಿಕಾರಿಗಳು ಮಾಸ್ಕ್ ಹಾಕದೆ ದೈಹಿಕವಾಗಿ ಅಂತರ ಕಾಪಾಡಿಕೊಳ್ಳದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಈ ಘಟನೆಯ ಬಗ್ಗೆ ವೈದ್ಯರೊಬ್ಬರು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಮಂಗಳೂರು ಐಎಂಎ ಅಧ್ಯಕ್ಷ ಡಾ. ಎಂ.ಎ.ಆರ್. ಕುಡ್ವ, ಕಾರ್ಯದರ್ಶಿ ಡಾ. ಅನಿಮೇಶ್ ಜೈನ್, ಖಜಾಂಚಿ ಡಾ. ಕುಮಾರಸ್ವಾಮಿ ಯು., ಡಾ. ಎಂ.ಕೆ. ಭಟ್ ಸಂಕಬಿತ್ತಿಲು, ಡಾ. ರಾಮಚಂದ್ರ ಕಾಮತ್ ಹಾಗೂ ಪದಾಧಿಕಾರಿಗಳು ಮಾಸ್ಕ್ ಧರಿಸದೇ, ಸುರಕ್ಷಿತ ಅಂತರ ಕಾಪಾಡಿಕೊಳ್ಳದೆ ಕೋವಿಡ್ ನಿಯಮ ಪಾಲಿಸದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಭಾರತೀಯ ದಂಡ ಸಂಹಿತೆಯ 269 ಮತ್ತು ಕರ್ನಾಟಕ ಸಾಂಕ್ರಮಿಕ ರೋಗಗಳ ಕಾಯ್ದೆ 2020ರ ಸೆಕ್ಷನ್ 4,5,9ರ ಅಡಿಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಐಎಂಎ ಮಂಗಳೂರು ಪದಾಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.


ಆದರೆ, ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸುವ ಬದಲು ಎನ್‌ಸಿ ಕೇಸ್ ದಾಖಲಿಸಿ ಸಂಬಂಧಪಟ್ಟ ವೈದ್ಯರಿಂದ ಮುಚ್ಚಳಿಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯ ಬಗ್ಗೆ ಖಾರವಾಗಿ ಬರೆದುಕೊಂಡಿರುವ ವೈದ್ಯ ಡಾ. ಶ್ರೀನಿವಾಸ್ ಕಕ್ಕಿಲ್ಲಾಯ, ತಮ್ಮ ಮೇಲೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.


ಆಗ ನಾನು ಒಬ್ಬ ಮಾತ್ರ ಮಾಸ್ಕ್ ಹಾಕಿಕೊಂಡಿರಲಿಲ್ಲ. ಆದರೆ, ಈ ಘಟನೆಯಲ್ಲಿ ಬಹುತೇಕ ಎಲ್ಲ ವೈದ್ಯರೂ ಮಾಸ್ಕ್ ಹಾಕಿಕೊಂಡಿಲ್ಲ.


ಆ ಘಟನೆ ವೀಡಿಯೋ ದೇಶಾದ್ಯಂತ ಪ್ರಸಾರವಾಗಿತ್ತು. ಆದರೆ, ಈ ಘಟನೆ ಕೇವಲ ಸ್ಥಳೀಯ ಸುದ್ದಿಯಾಗಿದೆ.


ಆ ಘಟನೆಯಲ್ಲಿ ಪೊಲೀಸ್ ಆಯುಕ್ತರ ಹೇಳಿಕೆ, ಉಪಮುಖ್ಯಮಂತ್ರಿಯ ಟ್ವೀಟ್, ಪೊಲೀಸ್ ಅಧಿಕಾರಿಗಳು ದೂರು ಸಲ್ಲಿಸಲು ಹೇಳಿದ್ದಾರೆ ಎಂದು ಅಂಗಡಿಯವನ ಹೇಳಿಕೆ, 13.30ಕ್ಕೆ ಅಂಗಡಿಯವನ ದೂರು ದಾಖಲು, 14.00 ಗಂಟೆಗೆ ಸ್ವಯಂ ಪ್ರೇರಿತ ಎಫ್‌ಐಆರ್.. ಮನೆಗೆ ಮತ್ತು ಕ್ಲೀನಿಕ್‌ಗೆ ಪೊಲೀಸ್ ಅಧಿಕಾರಿಗಳ ಭೇಟಿ...


ಆದರೆ, ಈ ಘಟನೆಗೆ ದೂರು ಸ್ವೀಕರಿಸಲು ಹಿಂಜರಿಕೆ, ನಿರಾಕರಣೆ, ಒತ್ತಾಯದ ಬಳಿಕ ಸ್ವೀಕೃತಿ, ಪತ್ರಿಕೆಯ ಪ್ರಶ್ನೆಗೆ ಪ್ರಾಥಮಿಕ ವಿಚಾರಣೆ ನಡೆಸಲಾಗುವುದು ಎಂಬ ಹಾರಿಕೆಯ ಉತ್ತರ. ಆ ಬಳಿಕ ಎಫ್‌ಐಆರ್ ದಾಖಲಿಸಬೇಕೆ ಅಥವಾ ಮಹಾನಗರ ಪಾಲಿಕೆಗೆ ವರ್ಗಾಯಿಸಬೇಕೇ ಎಂದು ನಿರ್ಧರಿಸಲಾಗುವುದು ಎಂಬ ಉತ್ತರ

ಎಂಬುದಾಗಿ ಕಕ್ಕಿಲ್ಲಾಯ ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಬರೆದುಕೊಂಡಿದ್ದಾರೆ.