ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ತಮಿಳುನಾಡು ಬಿಜೆಪಿ ಕ್ಯಾತೆ ತೆಗೆದಿದೆ. ಅಲ್ಲಿನ ರಾಜ್ಯಾಧ್ಯಕ್ಷ ಅಣ್ಣಾಮಲೈ ಈ ಯೋಜನೆ ಖಂಡಿಸಿ ಕರ್ನಾಟಕದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
ರಾಜ್ಯದ ಜೀವಜನ ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಿ ರಾಜ್ಯದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಯೋಜನೆಯೇ ಮೇಕೆದಾಟು ಯೋಜನೆ. ಆದರೆ, ಇಲ್ಲಿನ ಅನ್ನ-ನೀರಿನ ಋಣ ಹೊಂದಿರುವ ಐಪಿಎಸ್ ಅಧಿಕಾರಿ(ನಿವೃತ್ತ) ಹಾಗೂ ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಧ್ವನಿಎತ್ತಿರುವುದು ರಾಜ್ಯದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಆಗಸ್ಟ್ 5ನೇ ತಾರೀಕಿನಂದು ಪ್ರಸ್ತಾವಿತ ಯೋಜನೆಯನ್ನು ವಿರೋಧಿಸಿ ತಾವು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅಣ್ಣಾಮಲೈ ಘೋಷಣೆ ಮಾಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಕೆದಾಟು ಅಣೆಕಟ್ಟು ನಿರ್ಮಿಸುವುದಾಗಿ ಹೇಳಿದ್ಧಾರೆ. ಈ ಯೋಜನೆ ತಮಿಳುನಾಡು ರಾಜ್ಯದ ಜನರ ಹಾಗೂ ರೈತರ ವಿರೋಧಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡು ಪಾಲಿನ ನೀರನ್ನು ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
