"ಮಣ್ಣಿನ ಮಕ್ಕಳಿಗೆ ಉದ್ಯೋಗ ನೀಡಲು ನಿರಾಕರಿಸುತ್ತಿರುವ MRPL ನ ವಿಸ್ತರಣೆಗೆ ಯಾವ ಕಾರಣಕ್ಕೂ ಭೂಮಿ ನೀಡಬಾರದು" ಎಂದು ಹಾಸನ ಸಂಸದ ಪ್ತಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ. ಇದು ಸರಿಯಾದ ಮಾತು. ತುಳುನಾಡಿನ ಸಮಸ್ಥ ಜನತೆಯ ಒತ್ತಾಯವೂ ಇದೇ ಆಗಿದೆ.
Mrpl ನಾಲ್ಕನೇ ಹಂತದ ವಿಸ್ತರಣೆಗೆ ಪೆರ್ಮುದೆ ಗ್ರಾಮದ ಸುತ್ತಲೂ ನಡೆಯುತ್ತಿರುವ ಸಾವಿರ ಎಕರೆ ಜಮೀನಿನ ಸ್ವಾಧೀನ ಪ್ರಕ್ರಿಯೆಗೆ ತಕ್ಷಣ ರಾಜ್ಯ ಸರಕಾರ ತಡೆ ಹೇರಬೇಕು. ಜಿಲ್ಲೆಯ ಅಭಿವೃದ್ದಿಗೆ ಮೂರು ಕಾಸಿನ ಪ್ರಯೋಜನಕ್ಕೂ ಬಾರದ, ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನೂ ಸೃಷ್ಟಿಸದ ಮಾಲಿನ್ಯಕಾರಕ MRPL ನಂತಹ ಕಂಪೆನಿಗಳ ತುಳುನಾಡಿಗೆ ಇನ್ನು ಸಾಕು.
ದೂರದ ಹಾಸನ ಜಿಲ್ಲೆಯ ಯುವ ಸಂಸದ ಪ್ರಜ್ವಲ್ ರೇವಣ್ಣರ ಕಳಕಳಿಯ, ಸ್ಪಷ್ಟ ನಿಲುವುಗಳನ್ನು ಮೂರನೇ ಅವಧಿಯ ನಮ್ಮ ಸಂಸದ ನಳಿನ್ ಕುಮಾರ್ ಕಟೀಲು ತೆಗೆದು ಕೊಳ್ಳಲು ಏನು ಸಮಸ್ಯೆ ?
ಪಾರ್ಲಿಮೆಂಟ್ ನಿಂದ ಸ್ಥಳೀಯ ಪಂಚಾಯತ್ ವರಗೆ ಆಳ್ವಿಕೆ ನಡೆಸುತ್ತಿರುವ ಬಿಜೆಪಿಯ ಸಂಸದರು, ತುಳುನಾಡಿನ ಶಾಸಕರುಗಳು ಬಾಯಿ ಬಿಟ್ಟು ಮಾತಾಡಲಿ. "ಉದ್ಯೋಗ ನೀಡುವುದಿಲ್ಲ ಅಂತಾದರೆ, ನಮ್ಮ ಜಮೀನು ನಿಮಗೆ ದೊರಕುವುದಿಲ್ಲ. ಭೂ ಸ್ವಾಧೀನ ಪ್ರಕ್ರಿಯೆಗೆ ತಕ್ಷಣದಿಂದಲೇ ತಡೆ ಬೀಳಲಿದೆ" ಎಂದು ಹೇಳಲಿ, ಹೇಳಿದಂತೆ ನಡೆಯಲಿ.
ಆಗ MRPL ಸಹಿತ ಜಿಲ್ಲೆಯ ಉದ್ಯಮಗಳು ದಾರಿಗೆ ಬರಲಿದೆ. ಅಷ್ಟು ಮಾಡಲು ಸಿದ್ದರಿಲ್ಲ ಅಂತಾದರೆ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಜಿಲ್ಲೆಯ ಬಿಜೆಪಿ ಶಾಸಕರುಗಳು ರಾಜಿನಾಮೆ ಕೊಟ್ಟು ತೊಲಗಲಿ. ಇದು ತುಳುನಾಡ ಜನರ ಒಕ್ಕೊರಲ ಆಗ್ರಹ.
"ತುಳುನಾಡ ಅಭಿವೃದ್ದಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್"

