ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ತೈಲ ದರ ಏರಿಕೆ ವಿರುದ್ಧ ಮಂಗಳಾದೇವಿ ದೇವಸ್ಥಾನದ ಬಳಿಯಿರುವ ಪೆಟ್ರೋಲ್ ಬಂಕ್ ಎದುರುಗಡೆ ಪ್ರತಿಭಟನೆಯು ನಡೆಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ ವಹಿಸಿದ್ದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ತೈಲಕ್ಕೆ ಬಾರೆಲ್ ಗೆ 130 ಡಾಲರ್ ಇದ್ದಾಗಲೂ ಪೆಟ್ರೋಲ್ ಗೆ ಲೀಟರ್ ಗೆ 72 ರೂಪಾಯಿ ಇತ್ತು. ಈಗ ತೈಲದ ದರ ಬ್ಯಾರೆಲ್ ಗೆ 70 ಡಾಲರ್ ಗೆ ಇಳಿದಿದೆ. ಆದರೆ, ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100 ದಾಟಿದೆ. ಇದು ಬಿಜೆಪಿ ಜನರಿಗೆ ಮಾಡಿದ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರದ ಆಡಳಿತದಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಕೋವಿಡ್ ಸಂದಿಗ್ಧ ಸಮಯದಲ್ಲಿ ಬಿಜೆಪಿ ಸರಕಾರ ಪೆಟ್ರೋಲ್- ಡೀಸೆಲ್ ದರ ವಿಪರೀತವಾಗಿ ಏರಿಸುವ ಮೂಲಕ ಜನರ ಬದುಕನ್ನೇ ದುಸ್ತರಗೊಳಿಸಿದೆ ಎಂದು ಆರೋಪಿಸಿದರು.
ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಅವರೂ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪಾಲಿಕೆಯಲ್ಲಿ ಪ್ರತಿಪಕ್ಷ ನಾಯಕ ಎ. ಸಿ. ವಿನಯರಾಜ್, ಪಕ್ಷದ ಮುಖಂಡರಾದ ಹೊನ್ನಯ್ಯ, ಸದಾಶಿವ ಉಳ್ಳಾಲ್, ಟಿ. ಕೆ. ಸುಧೀರ್, ಸುನಿಲ್ ಪೂಜಾರಿ, ರಮಾನಂದ ಪೂಜಾರಿ, ನೀರಜ್ ಪಾಲ್, ಹೇಮಂತ್ ಗರೋಡಿ, ಉಮೇಶ್ ದೇವಾಡಿಗ, ಸುಧೀರ್ ಕಡೆಕಾರ್, ಪ್ರವೀಣ್, ಗೀತಾ, ಸವಾನ್ ಎಸ್. ಕೆ., ಮಾಜಿ ಕಾರ್ಪೊರೇಟರ್ ಗಳಾದ ಅಪ್ಪಿ, ಶೈಲಜಾ, ರತಿಕಲಾ, ವಿಜಯಲಕ್ಷ್ಮಿ, ಭಾಸ್ಕರ್ ರಾವ್ ಉಪಸ್ಥಿತರಿದ್ದರು.

