ಮಂಗಳೂರು: 12 ವರ್ಷದ ಬಾಲಕನ ಹತ್ಯೆ ಉಳ್ಳಾಲ ಪ್ರದೇಶ ಮಾತ್ರವಲ್ಲ ಇಡೀ ಮಂಗಳೂರನ್ನೇ ನಡುಗಿಸಿದೆ. ಬಾಲಕನ ಹತ್ಯೆ ಹಿಂದೆ ಆನ್ ಲೈನ್ ಗೇಮ್ ತಂದ ಭೀಭತ್ಸ ಪರಿಣಾಮ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಅಕೀಫ್ ಎಂಬ 12 ವರ್ಷದ ಬಾಲಕ ಮೊಬೈಲ್ ಆನ್ ಲೈನ್ ಗೇಮ್ ಪಬ್ಜಿಯಲ್ಲಿ ತಲ್ಲೀನನಾಗುತ್ತಿದ್ದ. ಪ್ರತೀ ಬಾರಿಯೂ ಗೆಲ್ಲುತ್ತಿದ್ದ ಎನ್ನಲಾಗುತ್ತಿದೆ. ಈ ವಿಷಯವನ್ನೇ ಮೊದಲಿಟ್ಟುಕೊಂಡು ಈ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ಮೊಹಮ್ಮದ್ ಹನೀಫ್ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಧ್ಯಮಕ್ಕೆ ಹೇಳಿದ್ದಾರೆ.
ಕಳೆದ ರಾತ್ರಿ ಈ ಘಟನೆ ನಡೆದಿದೆ. ಬಾಲಕ ಅಕೀಫ್ ಪಬ್ಜಿ ಆಟದಲ್ಲಿ ಬಹಳ ಎಕ್ಸ್‌ಪರ್ಟ್... ಪ್ರತಿ ಸಲವೂ ಆತನೇ ಗೆಲ್ಲುತ್ತಿದ್ದ. ಈ ಬಗ್ಗೆ ಇನ್ನೊಬ್ಬಾತ ದೀಪಕ್ ಎಂಬವನಿಗೆ ಅನುಮಾನವಿತ್ತು. ಒಟ್ಟಿಗೆ ಆನ್ ಲೈನ್ ನಲ್ಲಿ ಆಡೋಣ, ಆಗ ನಿನ್ನ ಸಾಮರ್ಥ್ಯ ಗೊತ್ತಾಗುತ್ತದೆ ಎಂದು ಆತ ಸವಾಲು ಹಾಕಿದ್ದ.
ಅದರಂತೆ ಕಳೆದ ರಾತ್ರಿ ಇಬ್ಬರೂ ಒಟ್ಟಿಗೆ ಮನೆಯಿಂದ ಸ್ವಲ್ಪ ದೂರ ಹೊರಗೆ ಪಬ್ಜಿ ಆಟ ಆಡಿದ್ದರು. ಆಗ ಅಕೀಫ್ ಸೋಲು ಕಂಡಿದ್ದ ಎನ್ನಲಾಗಿದೆ.
ಈ ಸಂಬಂಧ ಇಬ್ಬರ ನಡುವೆ ಜಗಳವಾಗಿದೆ. ಕಲ್ಲಿನಿಂದ ಹೊಡೆದು ದೀಪಕ್ ಅಕೀಫ್ ಎಂಬ ಬಾಲಕನ ಮೇಲೆ ಹಲ್ಲೆ ನಡೆದಿದೆ. ವಿಪರೀತ ರಕ್ತ ಸುರಿದು ಆತ ಬಿದ್ದಲ್ಲೇ ಹೆಣವಾದ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.
ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಅವರು, ದೀಪಕ್‌ನನ್ನು ಗಂಭೀರ ವಿಚಾರಣೆಗೆ ಒಳಪಡಿಸಲಾಗುವುದು. ಈ ಘಟನೆಯ ಸತ್ಯಾಂಶ ಶೀಘ್ರದಲ್ಲೇ ಹೊರಬೀಳಲಿದೆ. ಪಬ್ಜಿ ಯಂತಹ ಗೇಮ್ ಎಷ್ಟು ಅಪಾಯಕಾರಿ ಎಂಬುದು ಮನದಟ್ಟಾಗಬೇಕು. ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.


