ಮೂಡಬಿದಿರೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡಗಳಲ್ಲಿ ದರೋಡೆ ಮತ್ತು ಸುಲಿಗೆ ನಡೆಸುತ್ತಿದ್ದ ಕುಖ್ಯಾತ ಗ್ಯಾಂಗ್‌ನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಗ್ಯಾಂಗ್‌ನಲ್ಲಿ 9 ಮಂದಿ ಇದ್ದು, ಎಲ್ಲರ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.
ಮಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಈ ಆರೋಪಿಗಳು ಮೂರು ನಾಲ್ಕು ತಂಡಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದರು ಮತ್ತು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಮೂಡಬಿದಿರೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಹಾಗೂ ಅವರ ಸಿಬ್ಬಂದಿ ಎಪ್ರಿಲ್ 1ರಂದು ಅಬ್ದುಲ್ ರವೂಫ್(24) ರಾಮಮೂರ್ತಿ (23) ಎಂಬ ಆರೋಪಿಗಳನ್ನು ಬಂಧಿಸಿದ್ದರು.
ಎಪ್ರಿಲ್ 2ರಂದು ಅಶ್ರಫ್ ಪೆರಾಡಿ (27) ಸಂತೋಷ್ (24), ನವೀದ್ (36), ರಮಾನಂದ ಶೆಟ್ಟಿ (48), ಸುಮನ್ (24), ಸಿದ್ದಿಕ್ (27) ಮತ್ತು ಆಲಿಕೋಯ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಇವರೆಲ್ಲರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಬಂಧಿತರು ಮಾರುತಿ ಕಾರು, ಆಟೋ ರಿಕ್ಷಾ, ಇನ್ನೋವಾ ಕಾರು ಸೇರಿದಂತೆ 11 ಮೊಬೈಲ್‌ಗಳು ಏರ್ ಗನ್, ನಾಲ್ಕು ದ್ವಿಚಕ್ರ ವಾಹನ, ಚಿನ್ನದ ಒಡವೆಗಳು ಸೇರಿದಂತೆ ಒಟ್ಟು 32.22 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇನ್ನೂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಶಶಿಕುಮಾರ್ ಮಾಧ್ಯಮಕ್ಕೆ ತಿಳಿಸಿದರು.


