-->

DYFI urges comprehensive investigation | ಧಾರ್ಮಿಕ ಕ್ಷೇತ್ರಗಳ ಅಪವಿತ್ರ ಪ್ರಕರಣದ ಸಮಗ್ರ ತನಿಖೆ, ನೈಜ ಆರೋಪಿಗಳ ಬಂಧನಕ್ಕೆ ಡಿವೈಎಫ್ಐ ಆಗ್ರಹ

DYFI urges comprehensive investigation | ಧಾರ್ಮಿಕ ಕ್ಷೇತ್ರಗಳ ಅಪವಿತ್ರ ಪ್ರಕರಣದ ಸಮಗ್ರ ತನಿಖೆ, ನೈಜ ಆರೋಪಿಗಳ ಬಂಧನಕ್ಕೆ ಡಿವೈಎಫ್ಐ ಆಗ್ರಹ




ಕಳೆದ ನಾಲ್ಕು ತಿಂಗಳಿನಿಂದ ಈಚೆಗೆ ಧಾರ್ಮಿಕ ಕ್ಷೇತ್ರಗಳ ಹುಂಡಿಗೆ ಆಕ್ಷೇಪಾರ್ಹ ವಸ್ತುಗಳನ್ನು ಹಾಕುವುದು, ಕಲ್ಲು ತೂರಾಟ ನಡೆಸುವುದು ಸೇರಿದಂತೆ ಜ‌ನರ ಭಾವನೆಯನ್ನು ಘಾಸಿಗೊಳಿಸಿ ಮತೀಯ ಉದ್ವಿಗ್ನತೆ ಮೂಡಿಸುವ ಕೆಲಸ ಸತತವಾಗಿ ನಡೆಯುತ್ತಿದೆ. ಆದರೆ ಈ ಪ್ರಕರಣಗಳನ್ನು ಬೇಧಿಸಲು ಪೊಲೀಸ್ ಇಲಾಖೆ ವಿಫಲಗೊಂಡಿದೆ. ಪೊಲೀಸ್ ತನಿಖೆಯ ವೈಫಲ್ಯವನ್ನೆ ಬಳಸಿಕೊಂಡು ಕೆಲವು ಶಕ್ತಿಗಳು ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ನಡೆಸುತ್ತಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ದಕ್ಷ ಅಧಿಕಾರಿಗಳ ಮೂಲಕ ತನಿಖೆ ನಡೆಸಿ ಪ್ರಕರಣದ ಹಿಂದಿರುವ ಜಾಲವನ್ನು ಬೇಧಿಸಿ, ಪ್ರಕರಣದಲ್ಲಿ ಭಾಗಿಯಾಗಿರುವ ಕ್ರಿಮಿನಲ್ ಗಳನ್ನು ಬಂಧಿಸಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.


"ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ದುಷ್ಕರ್ಮಿಗಳಲ್ಲಿ ಒಬ್ಬ ರಕ್ತಕಾರಿ ಸತ್ತಿದ್ದಾನೆ, ಇಬ್ಬರು ಅನಾರೋಗ್ಯ ಕಾಡಿದುದರಿಂದ ಭೀತಿಗೊಂಡು, ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿ ತಪ್ಪು ಕಾಣಿಕೆ ಹಾಕಿ ಕ್ಷಮೆ ಕೋರಿದ್ದಾರೆ, ಅಲ್ಲಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ" ಎಂಬ ಸುದ್ದಿ‌ ವ್ಯಾಪಕವಾದ ಚರ್ಚೆಗೆ ಕಾರಣವಾಗಿತ್ತು. ಪೊಲೀಸ್ ಅಧಿಕಾರಿಗಳೂ ಅದೇ ರೀತಿಯಲ್ಲಿ ಪ್ರಕಟನೆ ನೀಡಿದ್ದರು. ಡಿವೈಎಫ್ಐ ಆಗಲೆ ಈ ಸುದ್ದಿಯ ಸತ್ಯಾಸತ್ಯತೆಯ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ರಕ್ತಕಾರಿ ಸತ್ತಿದ್ದಾನೆ ಎಂದು ಆರೋಪಿಸಲಾದ ಜೋಕಟ್ಟೆಯ ನವಾಜ್ ಒಂದೂವರೆ ವರ್ಷದಿಂದ ಎಚ್ ಐ ವಿ ಪೀಡಿತನಾಗಿದ್ದು, ಏಳೆಂಟು ತಿಂಗಳಿನಿಂದ ಹಾಸಿಗೆಯಿಂದ ಎದ್ದು ನಡೆಯಲಾರದ ಸ್ಥಿತಿಯಲ್ಲಿ ಇದ್ದ, ಒಂದೂವರೆ ತಿಂಗಳ ಹಿಂದೆ ಖಾಯಿಲೆ ಉಲ್ಬಣಗೊಂಡು ಪ್ರಾಣ ತ್ಯಜಿಸಿದ್ದ, ಇಂತಹ ಗಂಭೀರಾವಸ್ಥೆಯಲ್ಲಿದ್ದ ವ್ಯಕ್ತಿಯೊಬ್ಬ ಮೂರು ತಿಂಗಳ ಈಚೆಗೆ ನಡೆದ ಧಾರ್ಮಿಕ ಕ್ಷೇತ್ರಗಳ ಅಪವಿತ್ರದಂತಹ ಗಂಭೀರ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೇಗೆ ಸಾಧ್ಯ ? ಎಂದು ಪ್ರಶ್ನಿಸಿತ್ತು. ಇಬ್ಬರ ಶರಣಾಗತಿ, ತಪ್ಪೊಪ್ಪಿಗೆಯ ಹಿಂದೆಯೂ ನಿಗೂಢತೆ ಇರುವ ಸಾಧ್ಯತೆ ಇದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿತ್ತು.


ಈಗ ತನಿಖೆ ನಡೆಸಿರುವ ಪೊಲೀಸರು "ಎಮ್ಮೆಕೆರೆ ಕೊರಗಜ್ಜ ಕ್ಷೇತ್ರಕ್ಕೆ ಆಗಮಿಸಿದ ಇಬ್ಬರು ಮುಸ್ಲಿಂ ಯುವಕರು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಪುರಾವೆಗಳು ಲಭ್ಯ ಆಗಿಲ್ಲ" ಎಂದು ವಶಕ್ಕೆ ಪಡೆದ ಇಬ್ಬರನ್ನೂ ಬಿಡುಗಡೆಗೊಳಿಸಿದ್ದಾರೆ. ಇದರಿಂದ ಸಾರ್ವಜನಿಕ‌ ವಲಯದಲ್ಲಿ ವ್ಯಾಪಕ ಗೊಂದಲಗಳು, ವದಂತಿಗಳು ಹುಟ್ಟಿಕೊಂಡಿವೆ. ಕೆಲವು ಮತೀಯವಾದಿ ಶಕ್ತಿಗಳು ಕೊರಗಜ್ಜ ಸೇರಿದಂತೆ ತುಳುನಾಡಿನ ದೈವಗಳ ಕುರಿತು ಜನ ಸಾಮಾನ್ಯರಿಗಿರುವ ಪ್ರೀತಿ, ಗೌರವ, ನಂಬಿಕೆಗಳನ್ನು ಈ ಪ್ರಕರಣದಲ್ಲಿ ದುರ್ಬಳಕೆ ಮಾಡಿಕೊಂಡು ರಾಜಕೀಯಗೊಳಿಸುತ್ತಿವೆ. ಈ ಗೊಂದಲಗಳಿಂದ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ, ಕಲ್ಲೆಸೆದು ಹಾನಿಗೊಳಿಸಿದ ಪ್ರಕರಣಗಳು ಪತ್ತೆಯಾಗದೆ ಮೂಲೆ ಸೇರಿವೆ. ಇದು ಸಮಾಜದ ಸ್ವಾಸ್ಥ್ಯ, ಕೋಮುಸೌಹಾರ್ದತೆಗೆ ಭವಿಷ್ಯದಲ್ಲಿ ಹಾನಿ ಉಂಟು ಮಾಡುವ ಸಾಧ್ಯತೆ ಇದೆ.


ಈ ಎಲ್ಲಾ ಹಿನ್ನಲೆಯಲ್ಲಿ ಧಾರ್ಮಿಕ ಕ್ಷೇತ್ರಗಳ ಅಪವಿತ್ರಗೊಳಿಸುವಿಕೆ, ಕಲ್ಲೆಸೆತ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಎಮ್ಮೆಕೆರೆ ಕೊರಗಜ್ಜ ಕ್ಷೇತ್ರಕ್ಕೆ ತಮ್ಮ ವ್ಯಕ್ತಿಗತ ಸಮಸ್ಯೆ ಪರಿಹಾರಕ್ಕಾಗಿ ಹರಕೆ ಸಲ್ಲಿಸಲು ಬಂದಿದ್ದ ಇಬ್ಬರು ಮುಸ್ಲಿಂ ಯುವಕರು "ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ, ತಪ್ಪು‌ಕಾಣಿಕೆ ಸಲ್ಲಿಸಲು ಬಂದ ದುಷ್ಕರ್ಮಿಗಳು" ಎಂದು ಬಿಂಬಿಸಿದ, ಪೊಲೀಸ್ ಇಲಾಖೆ, ನಾಗರಿಕ ಸಮಾಜವನ್ನು ತಪ್ಪುದಾರಿಗೆಳೆದ, ಕಾನೂನು ಕೈಗೆತ್ತಿ ಅವರ ಮೇಲೆ ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿ ಮತೀಯ ಹಿಂಸಾಚಾರಕ್ಕೆ ಪ್ರಚೋದಿಸುವವರನ್ನು ಹದ್ದುಬಸ್ತಿನಲ್ಲಿಡಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಡಿವೈಎಫ್ಐ ಆಗ್ರಹಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article