ಕರ್ನಾಟಕದ ರಾಜಧಾನಿ ಬೆಂಗಳೂರು ಸಹಿತ ರಾಜ್ಯದ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳಲ್ಲಿ ಮಳೆಯಾಗಿದೆ. ಇಂದು ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಇನ್ನೂ ನಾಲ್ಕು ದಿನ ಗುಡುಗು ಸಿಡಿಲು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಕಾಫಿ ಮತ್ತು ಭತ್ತದ ಬೆಳೆಗೆ ಈ ಮಳೆ ಅಪಾಯಕಾರಿಯಾಗಿದೆ.
ಕರಾವಳಿ ಕರ್ನಾಟಕದಲ್ಲಿ ಮಿಂಚು ಗುಡುಗುಗಳ ಸಹಿತ ಭಾರೀ ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ಮೂಡಬಿದಿರೆ, ಸುರತ್ಕಲ್,ಮೂಲ್ಕಿಗಳಲ್ಲಿ ಭರ್ಜರಿ ಮಳೆಯಾಗಿದೆ. ಉಡುಪಿಯ ಬ್ರಹ್ಮಾವರದಲ್ಲಿ ಸಪ್ತಮಿ ಹೊಟೇಲ್‌ಗೆ ಸಿಡಿಲು ಬಡಿದಿದ್ದು, ಕಟ್ಟಡ ಸಂಪೂರ್ಣ ಹಾನಿಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರ ಸಾಹಸ ಪಟ್ಟಿದ್ದಾರೆ.
ಇದೇ ವೇಳೆ, ಅಕಾಲಿಕ ಮಳೆಗೆ ಬೆಂಗಳೂರು ಕೂಡ ತತ್ತರಿಸಿದೆ. ಮಳೆಯಿಂದ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದ್ದು, ಇದನ್ನು ತುಳಿದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿರುವ ವೆಂಕಟೇಶ್ ಎಂದು ಗುರುತಿಸಲಾಗಿದೆ.
also watch this video:
ಮಳೆಗೆ ಕಾರಣ
ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಬಂಗಾಳಕೊಲ್ಲಿಯಿಂದ ಆಗ್ನೇಯ ಮಾರುತಗಳು ಬೀಸುತ್ತಿದೆ. ಈ ಕಾರಣದಲ್ಲಿ ದಕ್ಷಿಣ ಭಾರತದಲ್ಲಿ ಐದು ದಿನಗಳ ಕಾಲ ವ್ಯಾಪಕವಾಗಿ ಮಳೆಯಾಗಲಿದೆ ಎಂಬುದು ಹವಾಮಾನ ಇಲಾಖೆಯ ಮುನ್ಸೂಚನೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ಪೂರ್ವ ದಿಕ್ಕಿನಿಂದ ಗಾಳಿ ಬೀಸುವುದರಿಂದ ಆಗಾಗ ಮಳೆ ಸುರಿಯುತ್ತದೆ. ಬಂಗಾಳ ಕೊಲ್ಲಿಯ ಸಮುದ್ರ ಮೇಲ್ಮೈ ಸುಳಿಗಾಳಿ ಪ್ರಬಲವಾಗಿರುವ ಕಾರಣ ಈಗ ಮಳೆಯಾಗುತ್ತಿದೆ.