
Life threat to DSS leader | ಪತ್ನಿ ಸಹೋದರಿ ಜೊತೆಗೂ ಸಲುಗೆ- ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ: ಡಿಎಸ್‌ಎಸ್ ಮುಖಂಡನಿಂದ ಪೊಲೀಸರಿಗೆ ದೂರು
ಬೆಳ್ತಂಗಡಿ: ಪತ್ನಿಯ ತಂಗಿಯ ಜೊತೆ ಸಲುಗೆಯಿಂದ ಇರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಡಿಎಸ್‌ಎಸ್ ಮುಖಂಡರೊಬ್ಬರಿಗೆ ಜೀವಬೆದರಿಕೆ ಹಾಕಿರುವ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾಯಿಲ ಗ್ರಾಮದ ಅಂಬೇಡ್ಕರ್ ನಗರ ನಿವಾಸಿ, ದಸಂಸ ದ ತಾಲೂಕು ಸಂಘಟನಾ ಸಂಚಾಲಕ , ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಎಸ್ ಲಾಯಿಲ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮುಂಡೋಳಿ ಕೇಶವ ಎಂಬಾತ ದೂರವಾಣಿ ಕರೆ ಮಾಡಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ವಿವಾಹಿತ ಮಹಿಳೆಯೊಬ್ಬರನ್ನು ಕೇಶವ ಎಂಬವರು ಅಪಹರಿಸಿ ವಿವಾಹವಾಗಿದ್ದರು. ಈ ಬಗ್ಗೆ ಕೇಶವ ಎಂಬವರ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ 9 ವರ್ಷಗಳ ಹಿಂದೆ ಅಪಹರಣ ಪ್ರಕರಣ ದಾಖಲಾಗಿತ್ತು.
ಕೇಶವ ಎಂಬವರು ತಮ್ಮ ಪತ್ನಿಯ ಸಹೋದರಿಯ ಜೊತೆಗೂ ಸಲುಗೆಯಿಂದ ಇರುವುದನ್ನು ಪ್ರಶ್ನಿಸಿದ ಕಾರಣಕ್ಕಾಗಿ ಜೀವಬೆದರಿಕೆ ಒಡ್ಡಿರುವುದಾಗಿ ನಾಗರಾಜ್ ಎಸ್ ಲಾಯಿಲ ಆರೋಪಿಸಿದ್ದಾರೆ.
ದೂರು ದಾಖಲಿಸಿರುವ ಬೆಳ್ತಂಗಡಿ ಪೋಲಿಸರು ತನಿಖೆ ಕೈಗೊಂಡಿದ್ದಾರೆ.