ಅಬ್ಬರದ ಅಲೆಗಳಿಗೆ ಸಿಲುಕಿ ಇನ್ನೇನು ಸಮುದ್ರಪಾಲಾಗುತ್ತಿದ್ದ ಯುವತಿಯನ್ನು ಜೀವರಕ್ಷಕ ಈಜುಗಾರರು ರಕ್ಷಿಸಿದ್ದಾರೆ.
ಸ್ಥಳೀಯ ಈಜುಗಾರ ಅಶೋಕ್ ಮತ್ತು ಅವರ ತಂಡ ಯುವತಿಯನ್ನು ಸುರಕ್ಷಿತವಾಗಿ ದಡ ಸೇರಿದ್ದು, ಇದೀಗ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಾಯಕ್ಕೆ ಸಿಲುಕಿದ್ದ ಯುವತಿ ಬೆಂಗಳೂರು ಬೊಮ್ಮಸಂದ್ರ ನಿವಾಸಿ ಕೀರ್ತಿ ಎಂದು ಹೇಳಲಾಗಿದೆ. ಈಕೆ ತನ್ನ ಸ್ನೇಹಿತೆಯರ ಜೊತೆ ಬೆಂಗಳೂರಿನಿಂದ ಕ್ಯಾಬ್ ಮೂಲಕ ಸುರತ್ಕಲ್‌ಗೆ ಆಗಮಿಸಿದ್ದರು. ಮಂಗಳವಾರ ವಿಹಾರಕ್ಕೆಂದು ಸೋಮೇಶ್ವರ ಬೀಚ್ ಗೆ ತೆರಳಿದ್ದರು.
ಈ ಸಂದರ್ಭದಲ್ಲಿ ನೀರಿನಲ್ಲಿ ಆಟವಾಡಲು ಸಮುದ್ರಕ್ಕೆ ಇಳಿದಾಗ, ಅಬ್ಬರದ ಅಲೆಗಳಿಗೆ ಆಯ ತಪ್ಪಿ ಸಮುದ್ರಕ್ಕೆ ಬಿದ್ದುಬಿಟ್ಟರು. ತಕ್ಷಣ ರಕ್ಷಣಾ ಕಾರ್ಯ ನಡೆಸಿದ ಜೀವರಕ್ಷಕ ಈಜುಗಾರರ ಅಶೋಕ್ ಮತ್ತು ತಂಡ ಕಾರ್ಯಪ್ರವೃತ್ತರಾಗಿ ಯುವತಿಯ ಜೀವ ರಕ್ಷಿಸಿದರು.
ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಯುವತಿ ಸುರಕ್ಷಿತವಾಗಿದ್ದಾರೆ.