ಚೆನ್ನೈ:
ತಮಿಳುನಾಡು ಮುಖ್ಯಮಂತ್ರಿ ಹಾಗೂ 'ದಳಪತಿ' ವಿಜಯ್ ಮತ್ತು ಅವರ ಧರ್ಮಪತ್ನಿ ಸಂಗೀತ ನಡುವಿನ ದಾಂಪತ್ಯ ಕಲಹ ಹಾಗೂ ವಿಚ್ಛೇದನ ಪ್ರಕರಣ ಇದೀಗ ಮತ್ತೊಂದು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಪತ್ನಿ ಸಂಗೀತ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುತ್ತಿದ್ದಂತೆಯೇ, ನಟಿ ತ್ರಿಷಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಾಲುಗಳು ನೆಟ್ಟಿಗರ ಗಮನ ಸೆಳೆದಿದ್ದು, ಕಾಲಿವುಡ್ ಅಂಗಳದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.
ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಹಾಗೂ ಸಂಗೀತ ಡಿವೋರ್ಸ್ ಸುದ್ದಿ ಹರಿದಾಡುತ್ತಿದ್ದಾಗ ನಟಿ ತ್ರಿಷಾ ಹೆಸರು ಕೂಡ ಪದೇ ಪದೇ ಪ್ರಸ್ತಾಪವಾಗುತ್ತಿತ್ತು.
ತ್ರಿಷಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲೇನಿದೆ?:
ವಿಜಯ್ ಅವರ ಪತ್ನಿ ಸಂಗೀತ ಡಿವೋರ್ಸ್ ಅರ್ಜಿ ಹಿಂಪಡೆದ ಕೆಲವೇ ದಿನಗಳಲ್ಲಿ ನಟಿ ತ್ರಿಷಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ.
ಮೊದಲ ಪೋಸ್ಟ್‌ನಲ್ಲಿ, "ಈ ವಯಸ್ಸಿನಲ್ಲಿ ಹೈಡ್ರಾಮಾ ಮಾಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.. ಹೋಗಿ ಹಣ ಸಂಪಾದಿಸಿ ಖುಷಿಯಾಗಿರಿ" ಎಂದು ಎಮೋಜಿ ಜೊತೆ ಬರೆದುಕೊಂಡಿದ್ದಾರೆ.
ಅದರ ಬೆನ್ನಲ್ಲೇ ಮತ್ತೊಂದು ಇನ್‌ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿರುವ ಅವರು 'ದೃಷ್ಟಿಯಾಗದಿರಲಿ' (Evil Eye) ಎಮೋಜಿ ಬಳಸಿ, "ಒಮ್ಮೆ ನೀವು ಯಾವುದಕ್ಕಾಗಿ ಪ್ರಾರ್ಥಿಸುತ್ತಿದ್ದಿರೋ, ಅಂತಹ ಸುಂದರ ಜೀವನದಲ್ಲಿ ನೀವೀಗ ಸಂಪೂರ್ಣವಾಗಿ ಮುಳುಗಿರುವುದೇ ದೊಡ್ಡ ಆಶೀರ್ವಾದ" ಎಂದು ಬರೆದಿದ್ದಾರೆ. ಈ ಪೋಸ್ಟ್‌ಗಳಲ್ಲಿ ತ್ರಿಷಾ ಯಾರ ಹೆಸರನ್ನೂ ಉಲ್ಲೇಖಿಸಿಲ್ಲವಾದರೂ, ನೆಟ್ಟಿಗರು ಇದನ್ನು ವಿಜಯ್ ಹಾಗೂ ಸಂಗೀತ ದಂಪತಿಗೆ ಟಾಂಗ್ ನೀಡಲು ಬರೆದಿರುವುದು ಎಂದು ವ್ಯಾಖ್ಯಾನಿಸುತ್ತಿದ್ದಾರೆ.
ವಿಜಯ್ – ತ್ರಿಷಾ ಒಡನಾಟದ ಮೇಲಿತ್ತು ಕಣ್ಣು:
ಇತ್ತೀಚಿನ ದಿನಗಳಲ್ಲಿ ನಟಿ ತ್ರಿಷಾ ಅವರ ಸೋಶಿಯಲ್ ಮೀಡಿಯಾ ಚಟುವಟಿಕೆಗಳು ತೀವ್ರ ವಿವಾದಗಳನ್ನು ಸೃಷ್ಟಿಸುತ್ತಿವೆ. ಇತ್ತೀಚೆಗೆ ನಡೆದ ಎಜಿಎಸ್ (AGS) ಕುಟುಂಬದ ಮದುವೆ ಸಮಾರಂಭದಲ್ಲಿ ವಿಜಯ್ ಹಾಗೂ ತ್ರಿಷಾ ಒಂದೇ ಬಣ್ಣದ ಮ್ಯಾಚಿಂಗ್ ಉಡುಪಿನಲ್ಲಿ ಜೊತೆಯಾಗಿ ಭಾಗವಹಿಸಿದ್ದರು.
ಅಷ್ಟೇ ಅಲ್ಲದೆ, ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದಾಗ ಮೊದಲ ಅಭಿನಂದನೆ ಸಲ್ಲಿಸಿದ್ದು ಇದೇ ತ್ರಿಷಾ. ವಿಜಯ್ ಅವರ ಜನ್ಮದಿನದಂದು ಮಧ್ಯರಾತ್ರಿ ಅವರ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದ್ದ ಫೋಟೋಗಳು ಕೂಡ ವೈರಲ್ ಆಗಿದ್ದವು. ಇದೀಗ ಸಂಗೀತ ವಿಚ್ಛೇದನ ಅರ್ಜಿ ಹಿಂಪಡೆದ ಬೆನ್ನಲ್ಲೇ ತ್ರಿಷಾ ಶೇರ್ ಮಾಡಿರುವ ಈ ನಿಗೂಢ ಪೋಸ್ಟ್‌ಗಳು ತಮಿಳು ಸಿನಿರಂಗದಲ್ಲಿ ತೀವ್ರ ಕುತೂಹಲ ಮೂಡಿಸಿವೆ.
